ಸ್ಟಾರ್ಟ್ಅಪ್ ಲೋಕದಲ್ಲಿ ಹೊಸ ಪ್ರಯೋಗ- ಸದ್ದು ಮಾಡುತ್ತಿದೆ ನಿಕಿತಾ ಲಲ್ವಾನಿಯ ಸೈಕಲ್ ಸಿಟಿ

ಟೀಮ್​ ವೈ.ಎಸ್.ಕನ್ನಡ

ಸ್ಟಾರ್ಟ್ಅಪ್ ಲೋಕದಲ್ಲಿ ಹೊಸ ಪ್ರಯೋಗ- ಸದ್ದು ಮಾಡುತ್ತಿದೆ ನಿಕಿತಾ ಲಲ್ವಾನಿಯ ಸೈಕಲ್ ಸಿಟಿ

Sunday June 04, 2017,

4 min Read

ನಿಕಿತಾ ಲಲ್ವಾನಿ, ವೃತ್ತಿಯಲ್ಲಿ ಎಂಜಿನಿಯರ್. ಸೈಕ್ಲಿಂಗ್ ಆಕೆಯ ಹವ್ಯಾಸ. ಈ ಹವ್ಯಾಸವೇ ನಿಕಿತಾಗೆ ಹೊಸ ಹೆಸರು ತಂದುಕೊಟ್ಟಿದೆ. ಭಾರತದದ ಬಹುತೇಕ ನಗರಗಳಲ್ಲಿ ಜನರು ಸೈಕಲ್ ತುಳಿಯುವ ಮನಸ್ಸು ಪಡೆಯಬೇಕು ಅನ್ನುವ ಕನಸನ್ನು ನಿಕಿತಾ ಇಟ್ಟುಕೊಂಡಿದ್ದಾರೆ. ಕೇವಲ ಸಾರಿಗೆ ವ್ಯವಸ್ಥೆಗೆ ಮಾತ್ರ ಸೈಕಲ್ ಅನ್ನು ಅವಲಂಭಿಸದೆ, ಅದನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಅನ್ನುವ ಆಸೆ ನಿಕಿತಾಗಿದೆ.

ನಿಕಿತಾ 2014ರಿಂದ ಸೈಕ್ಲಿಂಗ್ ಅನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. 2014ರಲ್ಲಿ ನಿಕಿತಾ ಕೆಲಸ ಮಾಡುತ್ತಿದ್ದ ಕಚೇರಿ, ಮನೆಯಿಂದ ಕೆಲವೇ ಕಿಲೋಮೀಟರ್​ಗಳಷ್ಟು ದೂರವಿದ್ದ ಸ್ಥಳಕ್ಕೆ ಸ್ಥಳಾಂತರಗೊಂಡಿತ್ತು. ಈ ಅವಧಿಯಲ್ಲಿ ಸೈಕಲ್ ತುಳಿಯುವುದರಿಂದ ಫಿಟ್ನೆಸ್ ಕೂಡ ಹೆಚ್ಚುತ್ತದೆ ಅನ್ನುವ ದೃಷ್ಟಿಯಿಂದ ಸೈಕ್ಲಿಂಗ್ ಆರಂಭಿಸಿದ್ರು. ಆದ್ರೆ ಅದು ಇವತ್ತು ಹವ್ಯಾಸವಾಗಿ ಬೆಳೆದುಬಿಟ್ಟಿದೆ. ಅಷ್ಟೇ ಅಲ್ಲ ನಿಕಿತಾ ಅರನ್ನು ಸ್ಟಾರ್ಟ್​ ಅಪ್​ ಲೋಕಕ್ಕೆ ಪರಿಚಯಿಸಿದೆ. 

image


ನಿಕಿತಾ ದೇಶದ ವಿವಿಧ ನಗರಗಳಲ್ಲಿ “ಸೈಕ್ಲಿಂಗ್ ಸಿಟಿಸ್” ಅನ್ನುವ ಸಂಸ್ಥೆ ಸ್ಥಾಪಿಸಿದ್ದಾರೆ. ವಿವಿಧ ನಗರಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಹಲವು ಸ್ವಯಂ ಸೇವಕರನ್ನು ಕೂಡ ಈ ಸಂಸ್ಥೆ ಹೊಂದಿದೆ. ಸೈಕ್ಲಿಂಗ್ ಟ್ರಯಲ್​ಗಳು ಸೇರಿದಂತೆ ಹಲವು ವಿಶೇಷ ಶಿಬಿರಗಳನ್ನು ಸೈಕ್ಲಿಂಗ್​ ಸಿಟಿಸ್​​ ಆಯೋಜನೆ ಮಾಡುತ್ತಿದೆ. ಸುಮಾರು 10 ವೃತ್ತಿಪರ ಸೈಕ್ಲಿಸ್ಟ್​ಗಳ ಸಹಾಯ ಸಂಸ್ಥೆಗೆ ಹೆಚ್ಚು ಜೀವ ತುಂಬಿದೆ. ನಿಕಿತಾ ತನ್ನ ಸ್ಟಾರ್ಟ್ ಅಪ್​ಗೆ ತನ್ನದೇ ಬಂಡವಾಳಗಳನ್ನು ಹೂಡಿದ್ದಾರೆ. ಕೆಲಸ ಮಾಡುತ್ತಿದ್ದಾಗ ಉಳಿಕೆಯಾಗಿದ್ದ ಹಣವನ್ನು ಇಲ್ಲಿ ತೊಡಗಿಸಿದ್ದಾರೆ.

ವಡೋದರ ಮತ್ತು ಅಮೃತಸರದ ನಡುವೆ

27 ವರ್ಷ ವಯಸ್ಸಿನ ನಿಕಿತಾಗೆ ಇತ್ತೀಚೆಗೆ ಡಚ್ ಆರ್ಗನೈಸೇಷನ್ ಆಫ್ ಸೈಕಲ್ ಸ್ಪೇಸ್, "ಬೈಸಿಕಲ್ ಮೇಯರ್ ಆಫ್ ವಡೋದರಾ" ಅನ್ನುವ ಗೌರವ ನೀಡಿ ಗೌರವಿಸಿತ್ತು. ಸಿಡ್ನಿ, ಮೆಕ್ಸಿಕೋ ಸೇರಿದಂತೆ ಇತರೆ ನಗರಗಳಿಂದಲೂ ಬೈಸಿಕಲ್ ಮೇಯರ್ ಗೌರವಕ್ಕೆ ಶಿಫಾರಸುಗಳನ್ನು ಬಂದಿತ್ತು. ಆದ್ರೆ ನಿಕಿತಾಗೆ ಈ ಗೌರವ ಸಿಕ್ಕಿದೆ. ಈ ಮೂಲಕ ಈ ಗೌರವ ಪಡೆದ ಭಾರತದ ಮೊತ್ತ ಮೊದಲ ಮಹಿಳೆ ಅನ್ನುವ ಖ್ಯಾತಿ ನಿಕಿತಾ ಪಾಲಾಗಿದೆ.

ಇದನ್ನು ಓದಿ: ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

ನಿಕಿತಾ "ಬೈಸಿಕಲ್ ಮೇಯರ್" ಸಮ್ಮಿಟ್​​ನಲ್ಲಿ ಹಾಜಾರಾಗಲು ಮುಂದಿನ ದಿನಗಳಲ್ಲಿ ನೆದರ್ಲೆಂಡ್​ನ ಆರ್ಮ್ ಸ್ಟರ್​ಡಂಗೆ ಪ್ರಯಾಣ ಬೆಳೆಸಲಿದ್ದಾರೆ. ವೆಲೋ ಸಿಟಿಯಲ್ಲಿ ನಡೆಯುವ ಮತ್ತು ಕಾನ್ಫರೆನ್ಸ್ ನಲ್ಲೂ ನಿಕಿತಾ ಭಾಗಿಯಾಗಲಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಸೈಕ್ಲಿಂಗ್ ಕಾನ್ಫರೆನ್ಸ್ ಅನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದರಲ್ಲಿ ನಿಕಿತಾ ಭಾರತದ ಪ್ರತಿನಿಧಿಯಾಗಲಿದ್ದಾಳೆ.

ಸೈಕ್ಲಿಂಗ್ ವಿಚಾರದಲ್ಲಿ ನೆದರ್ಲೆಂಡ್​ಗೆ ಸರಿಸಾಟಿಯಾಗಲು ಯಾರಿದಂಲೂ ಸಾಧ್ಯವಿಲ್ಲ. ಯುರೋಪಿನ 17 ಮಿಲಿಯನ್ ಸೈಕ್ಲಿಸ್ಟ್ ಗಳ ಪೈಕಿ ಸುಮಾರು 13.5 ಮಿಲಿಯನ್ ಸೈಕ್ಲಿಲಿಸ್ಟ್​ಗಳು ಇಲ್ಲಿದ್ದಾರೆ. ಅಷ್ಟೇ ಅಲ್ಲ ಸುಮಾರು 22.3 ಮಿಲಿಯನ್ ಬೈಸಿಕಲ್ ಗಳು ಇಲ್ಲಿವೆ. ವಿಶ್ವದ ಬೇರೆ ಯಾವ ದೇಶದಲ್ಲೂ ಸೈಕಲ್ ಅನ್ನು ಈ ಮಟ್ಟಕ್ಕೆ ಉಪಯೋಗಿಸುತ್ತಿಲ್ಲ.

image


ನಿಕಿತಾ ಹುಟ್ಟೂರು ರಾಜಸ್ತಾನದ ಕೋಟಾ. ಎನ್​ಐಟಿ ಸೂರತ್​ನಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್​ನಲ್ಲಿ ಎಂಜಿನಿಯರಿಂಗ್ ಪದವಿ ಕೂಡ ಪಡೆದುಕೊಂಡಿದ್ದಾಳೆ. ಎಂಜಿಯರಿಂಗ್ ಕಲಿಯುತ್ತಿರುವಾಗಲೇ ನಿಕಿತಾಗೆ ಸೈಕ್ಲಿಂಗ್ ಹುಚ್ಚು ಆರಂಭವಾಗಿತ್ತು. ಸೀನಿಯರ್ ಒಬ್ಬರು ಕೊಟ್ಟ ಸೈಕಲ್ ಒಂದನ್ನು ಕಾಲೇಜ್ ಕ್ಯಾಂಪಸ್​​ನಲ್ಲಿ ಓಡಿಸುತ್ತಿದ್ದ ನಿಕಿತಾ ನಿಧಾನವಾಗಿ ಸೈಕಲ್ ಕಡೆ ಹೆಚ್ಚು ಆಕರ್ಷಿತರಾದ್ರು.

ಸೈಕ್ಲಿಂಗ್ ಸಿಟಿ- ಸಾಮಾಜಿಕ ಕಳಕಳಿಯ ಸ್ಟಾರ್ಟ್​ಅಪ್

ಸೈಕ್ಲಿಂಗ್ ಸಿಟಿ ಮೂಲಕ ನಿಕಿತಾ ವಯಸ್ಕರನ್ನು ಸೈಕಲ್​ಗಳತ್ತ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಜನರು ಸೈಕಲ್​​ಗಳನ್ನು ಖುಷಿ, ತಮಾಷೆ, ಸಾಹಸ ಮತ್ತು ಸಾರಿಗೆ ವ್ಯವಸ್ಥೆಗೆ ಬಳಸಿಕೊಳ್ಳುವಂತೆ ಮಾಡುವುದು ಇವರ ಉದ್ದೇಶವಾಗಿದೆ. ವಡೋದರಾದಲ್ಲಿ ಸೈಕ್ಲಿಂಗ್ ಈವೆಂಟ್​ಗಳನ್ನು ಆಯೋಜಿಸಿ, ಆರೋಗ್ಯ ಪಡೆದುಕೊಳ್ಳಲು ಸೈಕ್ಲಿಂಗ್ ಎಷ್ಟು ಉಪಯುಕ್ತ ಅನ್ನುವುದನ್ನು ತಿಳಿಸಿಕೊಡುತ್ತಿದ್ದಾರೆ.

“ ಕಳೆಗುಂದಿರುವ ಜೀವನ ಶೈಲಿಗೆ ಸೈಕ್ಲಿಂಗ್ ಹೊಸ ಉತ್ಸಾಹವನ್ನು ತಂದುಕೊಡುತ್ತದೆ. ಸೈಕಲ್ ಬಳಕೆ ಪರಿಸರ ಸಂರಕ್ಷಣೆಗೂ ಸಹಕಾರಿ. ಇಂಧನ ಉಳಿತಾಯದ ಜೊತೆಗೆ ವಾಯುಮಾಲಿನ್ಯ ತಡೆಯಲು ಕೂಡ ಸೈಕ್ಲಿಂಗ್ ಸಹಕಾರಿ”
- ನಿಕಿತಾ, ಸೈಕ್ಲಿಂಗ್ ಸಿಟಿ ಸಂಸ್ಥಾಪಕಿ

ಸೈಕ್ಲಿಂಗ್ ಸಿಟಿ ಹಲವು ಸೈಕ್ಲಿಂಗ್ ಈವೆಂಟ್​​ಗಳನ್ನು ಆಯೋಜನೆ ಮಾಡುವ ಮೂಲಕ ಜನರಿಗೆ ಸೈಕ್ಲಿಂಗ್​ನ ಮಹತ್ವವನ್ನು ಸಾರುತ್ತಿದೆ. ಇದಕ್ಕಾಗಿ "ಟ್ರೈ ಸೈಕ್ಲಿಂಗ್" ಅನ್ನುವ ಪೈಲಟ್ ಪ್ರಾಜೆಕ್ಟ್ ಅನ್ನು ಕೂಡ ಆರಂಭ ಮಾಡಿದೆ. ಜರ್ಮನಿ ಮೂಲದ ಎಂಎನ್​ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನಿಕಿತಾ ಅಲ್ಲಿನ ಕೆಲವು ಸ್ನೇಹಿತರನ್ನು ಸೈಕಲ್ ಪ್ರೇಮಿಗಳನ್ನಾಗಿ ಪರಿವರ್ತಿಸಿದ್ದಾರೆ. ವಡೋದಾರದಲ್ಲಿರುವ ಇತರೆ ಕಚೇರಿಗಳಲ್ಲೂ ಸೈಕಲ್ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.

ನಿಕಿತಾ ಹಲವು ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಬರೋಡಾದ ಐತಿಹಾಸಿಕ ಸ್ಥಳಗಳನ್ನು ಸೈಕಲ್ ಮೂಲಕವೇ ತಲುಪುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಬರೋಡಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಸೈಕಲ್ ಮೂಲಕ ಪ್ರವಾಸಿ ಸ್ಥಳಗಳನ್ನು ನೋಡುವ ಹಾಗೇ ಗೈಡ್ ಗಳ ಮೂಲಕ ಹುರಿದುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ವರ್ಲ್ಡ್ ಹೆರಿಟೇಜ್ ದಿನವಾಗಿದ್ದ ಏಪ್ರಿಲ್ 18ರಂದು ನಿಕಿತಾ ಸುಮಾರು 30 ಜನರನ್ನು ಸೈಕಲ್ ಮೂಲವೇ ಐತಿಹಾಸಿಕ ಪ್ರವಾಸಿ ತಾಣಗಳನ್ನು ಭೇಟಿ ಮಾಡುವಂತೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಸೈಕಲ್ ಮೂಲಕವೇ ಆಹಾರ ಹಂಚುವ ಬಗ್ಗೆ ಯೋಜನೆಗಳನ್ನು ರೂಪಿಸಿದ್ದಾರೆ. ನಿಕಿತಾ ಯೋಜನೆಗಳಿಗೆ ಡೆಕಥ್ಲಾನ್ ನಂತಹ ಕ್ರೀಡಾಸಾಮಾಗ್ರಿ ಪೂರೈಕೆ ಮಾಡುವ ಕಂಪನಿಗಳು ಕೈ ಜೋಡಿಸಿವೆ. ನಿಕಿತಾ ಮನೆಯಲ್ಲಿ ಹಾಳು ಬಿದ್ದಿರುವ ಸೈಕಲ್​ಗಳಿದ್ದರೆ ಅದನ್ನು ವಾಪಾಸ್ ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಈ ಸೈಕಲ್​ಗಳನ್ನು ರಿಪೇರಿ ಮಾಡಿ ಬಡ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಹೊಂದಿದ್ದಾರೆ.

ಸೇಫ್ಟಿ ಮತ್ತು ಕಾರ್ಯಗತ ಯೋಜನೆಗಳು

ಮೆಟ್ರೋ ನಗರಗಳಲ್ಲಿ ಜನರು ಸೈಕಲ್​ಗಳ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ ಅನ್ನುವುದನ್ನು ನಿಕಿತಾ ಅರಿತಿದ್ದಾರೆ. ಟ್ರಾಫಿಕ್ ಕಿರಿಕಿರಿ ಮತ್ತು ಪ್ರಯಾಣದ ಅಂತರ ಹೆಚ್ಚಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಆದ್ರೆ 2ನೇ ಹಂತದ ನಗರಗಳಲ್ಲಿ ಸೈಕಲ್ ಬಳಕೆ ಸುಲಭವಾಗಿದೆ. ಈ ಮೂಲಕ ಬದಲಾವಣೆಗೆ ಪ್ರಯತ್ನ ಮಾಡಬೇಕು ಎಂದು ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

image


ಸೈಕ್ಲಿಸ್ಟ್​​ಗಳಿಗೆ ಸೇಫ್ಟಿ ದೊಡ್ಡ ತಲೆನೋವಾಗಿದೆ. ಯಾಕಂದ್ರೆ ಸೈಕ್ಲಿಸ್ಟ್​ಗಳಿಗಾಗಿಯೇ ಪ್ರತ್ಯೇಕ ಮಾರ್ಗವಿಲ್ಲ. ಸಂಚಾರ ದಟ್ಟಣೆ ಇರುವ ಕಡೆಗಳಲ್ಲಿ ನಗರ ಪಾಲಿಕೆಗಳು ಸೈಕ್ಲಿಸ್ಟ್​​ಗಳಿಗಾಗಿ ವಿಶೇಷ ಲೇನ್ ಮಾಡಬೇಕು ಎಂದು ನಿಕಿತಾ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಜನ ಹೆಚ್ಚೆ ಹೆಚ್ಚು ಸೈಕಲ್​ಗಳನ್ನು ಬಳಸಿದರೆ, ಆಡಳಿ ಸಂಸ್ಥೆಗಳು ಕೂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತವೆ ಅನ್ನುವ ಸತ್ಯವನ್ನು ಜನರಿಗೆ ತಿಳಿಹೇಳುತ್ತಿದ್ದಾರೆ.

“ನಾನು ಸೈಕ್ಲಿಂಗ್ ಆರಂಭಿಸಿ ಮೂರು ವರ್ಷಗಳಾಗಿವೆ. ನನ್ನ ಸಹಪಾಠಿಗಳು ನಿಧಾನವಾಗಿ ಸೈಕಲ್​ಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಹಲವರು ಸೈಕ್ಲಿಸ್ಟ್​ಗಳಾಗುವ ಬಗ್ಗೆ ಚರ್ಚೆಗಳನ್ನು ಮಾಡುತ್ತಿದ್ದಾರೆ. ಬದಲಾವಣೆ ಹತ್ತಿರದಲ್ಲೆ ಇದೆ ಅನ್ನುವ ವಿಶ್ವಾಸ ನನ್ನದು ”
- ನಿಕಿತಾ, ಸೈಕ್ಲಿಂಗ್ ಸಿಟಿ ಸಂಸ್ಥಾಪಕಿ

ನಿಕಿತಾ ದೇಶದ ಎಲ್ಲಾ ಸೈಕ್ಲಿಂಗ್ ಸಿಟಿಗಳನ್ನು ಒಂದೇ ಆನ್​ಲೈನ್ ಸಿಸ್ಟಂಗೆ ತರುವ ಪ್ರಯತ್ನದಲ್ಲೂ ಇದ್ದಾರೆ. ದೇಶದ ಯಾವುದೋ ಮೂಲೆಯಲ್ಲಿರುವ ಸೈಕ್ಲಿಸ್ಟ್ ಮತ್ತೊಂದು ಕಡೆ ಇರುವ ಸೈಕ್ಲಿಸ್ಟ್ ಬಗ್ಗೆ ತಿಳಿದುಕೊಳ್ಳಬೇಕು ಅನ್ನುವ ಉದ್ದೇಶವನ್ನು ನಿಕಿತಾ ಹೊಂದಿದ್ದಾರೆ. ಸೈಕಲ್ ಸಿಟಿ ಮೂಲಕ, ರಿಪೇರಿ ಸೆಂಟರ್​ಗಳು, ಸೈಕ್ಲಿಂಗ್ ಎಕ್ಸ್​ಪರ್ಟ್​ಗಳನ್ನು ಒಂದುಗೂಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಶಾಲಾ, ಕಾಲೇಜುಗಳಲ್ಲೂ ಸೈಕಲ್​ಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳುತ್ತಿದ್ದಾರೆ. ಮೋಟಾರ್ ಬೈಕ್ ಮತ್ತು ಸ್ಕೂಟರ್​ಗಳ ಬದಲು ಸ್ಟೈಲಿಶ್ ಸೈಕಲ್​ಗಳನ್ನು ಮಕ್ಕಳು ಆರಿಸಿಕೊಂಡರೆ, ಅವರ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆಯೂ ನಡೆಯುತ್ತದೆ. ದೊಡ್ಡ ದೊಡ್ಡ ಹೊಟೇಲ್​​ಗಳು ಕೂಡ ಸೈಕಲ್ ಗಳನ್ನು ಇಟ್ಟುಕೊಂಡು, ಪ್ರವಾಸಿಗರನ್ನು ಅದರ ಮೂಲಕವೇ ಪ್ರೋತ್ಸಾಹಿಸಬೇಕು ಅನ್ನುವ ಯೋಜನೆ ಕೂಡ ನಿಕಿತಾಗೆ ಇದೆ. ಒಟ್ಟಿನಲ್ಲಿ ನಿಕಿತಾ ಆರಂಭಿಸಿರುವ ಸೈಕಲ್ ಸಿಟಿ ಹೊಸ ಯೋಚನೆಗಳನ್ನು ಹುಟ್ಟುಹಾಕಿರುವು ಸುಳ್ಳಲ್ಲ.

ಇದನ್ನು ಓದಿ:

1. ಪ್ಲಾಸ್ಟಿಕ್​ ಮರುಬಳಕೆಗೆ ಮತ್ತೊಂದು ಪ್ರಯತ್ನ- ಡಿಸೇಲ್​ ತಯಾರಿಗೆ ಅನ್ವೇಷಣೆ 

2. 9ನೇ ತರಗತಿಗೆ ಶಾಲೆ ಬಿಟ್ಟ ಪೋರ : 13 ವರ್ಷಕ್ಕೆ ಉದ್ಯಮಿಯಾದ ಧೀರ 

3. ಗಾಯಗೊಂಡ ಪ್ರಾಣಿಗಳಿಗೆ ಆಶ್ರಯ ತಾಣ- ವಿರಾಟ್​ ಕೊಹ್ಲಿ ಭೇಟಿ ಬಳಿಕ ಬದಲಾಗಿದೆ ಅದೃಷ್ಟ