ಉದ್ಯಮಮ ಆರಂಭಕ್ಕೆ  ಅಡ್ಡಿಯಾಗದ ವಯಸ್ಸು..!

ಟೀಮ್​ ವೈ.ಎಸ್​. ಕನ್ನಡ

0

ಉದ್ಯಮಿಗಳಿಗೆ ವಯಸ್ಸು ಅನ್ನೋದು ಕೇವಲ ಸಂಖ್ಯೆಯಷ್ಟೇ. ವಯಸ್ಸು ಹೆಚ್ಚಾದ್ರೂ ಯಶಸ್ವಿ ಉದ್ಯಮಿಗೆ ಸುಸ್ತು ಅನ್ನೋದು ಕಾಡೋದೇ ಇಲ್ಲ. ಹೊಸ ಹೊಸ ಪ್ಲಾನ್‌ಗಳನ್ನು ಮಾಡಬೇಕು. ಉದ್ಯಮವನ್ನು ವಿಸ್ತರಿಸಬೇಕು ಅನ್ನುವುದೇ ದೊಡ್ಡ ಕನಸಾಗಿರುತ್ತದೆ. ಇದಕ್ಕೊಂದು ಉದಾಹರಣೆ ಫ್ರಾನ್ಸ್‌ನ ಜೀನ್‌ ಮಾರ್ಕ್‌ ಬೊರೆಲ್ಲೋ. ಜೀನ್‌ ವಯಸ್ಸು ಈಗ 59 ದಾಟಿದೆ. ಸೋಶಿಯಲ್‌ ಸಾಲಿಡಾರಿಟಿ ಎಕಾನಮಿ ಗ್ರೂಪ್‌ (ಗ್ರೂಪ್‌ SOS) ಅನ್ನೋ ಕಂಪನಿಯ ಸಂಸ್ಥಾಪಕ. ಗ್ರೂಪ್‌ SOS ವಿಶ್ವದಲ್ಲೇ ಅತೀ ಹೆಚ್ಚು ಸೋಶಿಯಲ್‌ ಎಂಟರ್‌ಪ್ರೈಸ್‌ ಉದ್ಯಮವನ್ನು ಹೊಂದಿದೆ. ಜೀನ್‌ ಮಾರ್ಕ್‌ ಬೊರೆಲ್ಲೋ ಮತ್ತವರ ತಂಡ ಈಗ ಸುಮಾರು 400ಕ್ಕೂ ಅಧಿಕ ಕಂಪನಿಗಳನ್ನು ಹೊಂದಿದೆ. ಅಚ್ಚರಿ ಅಂದ್ರೆ ಗ್ರೂಪ್‌ SOSನ ಅಧೀನದಲ್ಲಿ ಬರುವ ಎಲ್ಲಾ ಕಂಪನಿಗಳು ಸ್ವತಂತ್ರ ಹಣಕಾಸು ವ್ಯವಸ್ಥೆಯನ್ನು ಕೂಡ ಹೊಂದಿವೆ.

ಗ್ರೂಪ್‌ SOS ಆರಂಭವಾಗಿದ್ದು 1984ರಲ್ಲಿ. ಕಳೆದ 32 ವರ್ಷಗಳಲ್ಲಿ ಗ್ರೂಪ್‌ SOS 35 ದೇಶಗಳಿಗೆ ವಿಸ್ತರಿಸಿದೆ. ಸದ್ಯಕ್ಕೆ ಸುಮಾರು 15000ಕ್ಕಿಂತಲೂ ಅಧಿಕ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಗ್ರೂಪ್‌ SOS ಶಿಕ್ಷಣ, ಆರೋಗ್ಯ, ಹೌಸಿಂಗ್‌, ಎಂಪ್ಲಾಯಿಮೆಂಟ್‌ ಸೇರಿದಂತೆ ಹಲವು ಸಾಮಾಜಿಕ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಗ್ರೂಪ್‌ SOS ಯುರೋಪ್‌ ದೇಶಗಳಲ್ಲಿ ಅತ್ಯುತ್ತಮ ಪ್ರಸಿದ್ಧಿ ಪಡೆದುಕೊಂಡಿದೆ.

ಅಂದಹಾಗೇ, ಜೀನ್‌ ಮಾರ್ಕ್‌ ಬೊರೆಲ್ಲೋರನ್ನು ಸೋಶಿಯಲ್‌ ಸೆಕ್ಟರ್‌ನ "ಬಿಲ್‌ ಗೇಟ್ಸ್‌" ಅಂತನೂ ಕರೆಯೋದುಂಟು. ಯಾಕಂದ್ರೆ ಜೀನ್‌ ಗಳಿಕೆಯಲ್ಲೂ ಸಾಕಷ್ಟು ಮುಂದಿದ್ದಾರೆ. ಫ್ರಾನ್ಸ್‌ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಸೈನಿಕನ ಮಗನಾಗಿ ಹುಟ್ಟಿದ್ದ ಜೀನ್‌ ಸಾಕಷ್ಟು ಕಷ್ಟಪಟ್ಟು ಈ ಸಾಧನೆ ಮಾಡಿದ್ದಾರೆ. 1984ರಲ್ಲಿ ಜೀನ್‌ ಗ್ರೂಪ್‌ SOS ಹುಟ್ಟು ಹಾಕಿದ್ರು. ಆಗ ಅದು ಕೇವಲ ಒಂದೇ ಒಂದು ಸಂಸ್ಥೆಯಾಗಿತ್ತು. ಫ್ರಾನ್ಸ್‌ನಲ್ಲಿದ್ದ ಡ್ರಗ್‌ ಮಾಫಿಯಾ ವಿರುದ್ಧ ಹೋರಾಟ ಮಾಡುತ್ತಾ ಡಗ್ಸ್‌ನಿಂದ ತೊಂದರೆಗೀಡಾದವರ ನೆರವಿಗೆ ನಿಂತ ಮೊದಲ ಸಂಸ್ಥೆ ಅನ್ನೋ ಹೆಗ್ಗಳಿಕೆ ಗ್ರೂಪ್‌ SOS ಪಾಲಿಗಿದೆ. ಜೀನ್‌ ಡ್ರಗ್ಸ್‌ನ ದಾಸರಾಗಿದ್ದ ಹಲವರ ಮನ ಪರಿವರ್ತಿಸುವ ಕಾರ್ಯ ಮಾಡಿದ್ರು. ಹೆಚ್‌ಐವಿ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದವರಿಗಾಗಿ ರಕ್ತ ಪರೀಕ್ಷಾ ಕೇಂದ್ರವನ್ನು ಆರಂಭಿಸಿದ್ರು. ಹೆಲ್ತ್‌ ಕೇರ್‌ ಉದ್ಯಮಕ್ಕೆ ಕಾಲಿಟ್ಟು ಆಸ್ಪತ್ರೆಗಳನ್ನು ಕಟ್ಟಿದ್ರು. ನಿವೃತ್ತರಿಗಾಗಿ ಮನೆಗಳನ್ನು ಕೂಡ ಕಟ್ಟಿಸಿಕೊಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ರು.

ಜೀನ್‌ ಒಂದೊಂದೇ ಹೆಜ್ಜೆಗಳನ್ನು ಇಟ್ಟು ಇವತ್ತು ಯಶಸ್ಸಿನ ಶಿಖರ ಏರಿದ್ದಾರೆ. ಚಿಕ್ಕ ಚಿಕ್ಕ ಹೆಜ್ಜೆಗಳು ಜೀನ್‌ರನ್ನು ಇವತ್ತು ವಿಶ್ವದ ಪ್ರಸಿದ್ಧ ವ್ಯಕ್ತಿಯನ್ನಾಗಿಸಿದೆ. ಇವತ್ತು ಗ್ರೂಪ್‌ SOS ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ. ಸದ್ಯಕ್ಕೆ ಗ್ರೂಪ್‌ SOS 600 ಮಿಲಿಯನ್‌ ಯುರೋ ವಹಿವಾಟು ನಡೆಸುತ್ತಿದೆ. ಈ ವಹಿವಾಟನ್ನು 1 ಬಿಲಿಯನ್‌ ಯೂರೋಗೆ ಹೆಚ್ಚಿಸಿ ಗ್ರೂಪ್‌ SOSನಿಂದ ನಿವೃತ್ತರಾಗುವ ಕನಸು ಜೀನ್‌ ಮಾರ್ಕ್‌ ಬೊರೆಲ್ಲೋ ಅವರದ್ದು. ಫ್ರಾನ್ಸ್‌ ಉದ್ಯಮಿಯ ಈ ಸಾಧನೆ ವಿಶ್ವದ ಎಲ್ಲಾ ಉದ್ಯಮಿಗಳಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಇದನ್ನು ಓದಿ

1. ಕಲಿಯುವ ಹಠ, ಛಲ ಬಿಡಲಿಲ್ಲ- ಗಿನ್ನೆಸ್​ ದಾಖಲೆ ಬರೆದ ಕನ್ನಡ ನೃತ್ಯಗಾರ್ತಿ..!

2. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ..!

3. ಎಲ್ಲಾ ಕಡೆ ಸಿಗುತ್ತೆ "ಅಮ್ಮ"ನ ಕೈ ಅಡುಗೆ ರುಚಿ..!