ಆಸ್ಟ್ರೇಲಿಯಾದ ವರ್ಷದ ಉದ್ಯಮಿ ಭಾರತದ ಈ 'ಚಾಯ್​ವಾಲಿ' 

ಟೀಮ್ ವೈ.ಎಸ್.ಕನ್ನಡ 

1

26ರ ಹರೆಯದ ಉಪ್ಮಾ ವೃದ್ಧಿ ಭಾರತದ 'ಚಾಯ್​ವಾಲಿ'. ಭಾರತೀಯ ಮೂಲದ ಉಪ್ಮಾ ನೆಲೆಸಿರೋದು ಆಸ್ಟ್ರೇಲಿಯಾದಲ್ಲಿ. ವೃತ್ತಿಯಲ್ಲಿ ಇವರೊಬ್ಬ ವಕೀಲೆ. ಸದ್ಯ 'ಚಾಯ್​ವಾಲಿ' ಅನ್ನೋ ಕಂಪನಿಯನ್ನು ಆರಂಭಿಸಿರುವ ಉಪ್ಮಾ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರಿಗೆ ಗುಣಮಟ್ಟದ ಚಹಾ ನೀಡ್ತಿದ್ದಾರೆ. ಕೇವಲ ಎರಡು ವರ್ಷಗಳಲ್ಲಿ ಉಪ್ಮಾ ಅವರ 'ಚಾಯ್​ವಾಲಿ' ಬ್ರಾಂಡ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಅಷ್ಟೇ ಅಲ್ಲ 2016ರ 'ಆಸ್ಟ್ರೇಲಿಯಾದ ವರ್ಷದ ಮಹಿಳಾ ಉದ್ಯಮಿ' ಪ್ರಶಸ್ತಿಗೂ ಉಪ್ಮಾ ಆಯ್ಕೆಯಾಗಿರೋದು ವಿಶೇಷ. ಇತ್ತೀಚೆಗಷ್ಟೆ ಸಿಡ್ನಿಯಲ್ಲಿ ಆಯೋಜಿಸಿದ್ದ ಇಂಡಿಯನ್ ಆಸ್ಟ್ರೇಲಿಯನ್ ಬ್ಯುಸಿನೆಸ್ & ಕಮ್ಯೂನಿಟಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ 'ಚಾಯ್​ವಾಲಿ' ಉಪ್ಮಾರನ್ನು ಗೌರವಿಸಲಾಗಿದೆ.

ಉಪ್ಮಾ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ದಾಗ್ಲೇ 'ಚಾಯ್​ವಾಲಿ'ಯನ್ನು ಕೂಡ ಆರಂಭಿಸಿದ್ರು. ಆಕೆಯ ಅಜ್ಜ ಆಯುರ್ವೇದ ವೈದ್ಯರು, ಗಿಡಮೂಲಿಕೆಗಳಿಂದ ಅದ್ಭುತ ಚಹಾ ಮಾಡುವುದು ಹೇಗೆ ಅನ್ನೋದನ್ನು ಉಪ್ಮಾಗೆ ಕಲಿಸಿಕೊಟ್ಟವರು ಅವರೇ. ಹೀಗೆ ಆರಂಭವಾದ ಅವರ ಚಹಾ ಪಯಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಉಪ್ಮಾ ಅವರೇ ತಯಾರಿಸುವ ರುಚಿ-ಶುಚಿಯಾದ ಆರೋಗ್ಯಕರ ಚಹಾ ಭಾರೀ ಫೇಮಸ್ ಆಗಿದೆ.

''ಎಲ್ಲೇ ಹೋದ್ರೂ ನಾನು ಚಹಾ ಮಾಡುತ್ತೇನೆ, ಉಪ್ಮಾ ಒಂದು ಚಹಾ ಮಾಡಮ್ಮ ಅಂತಾ ನನ್ನ ಪೋಷಕರು ಕೇಳಿಕೊಳ್ತಾರೆ. ನನ್ನ ಸಹೋದರನ ಮದುವೆಯಲ್ಲಿ ಅತಿಥಿಗಳಿಗಾಗಿ ಬಹುಷಃ ನಾನು 1000 ಕಪ್ ಚಹಾ ಮಾಡಿದ್ದೇನೆ. ಸ್ಕಾಲರ್ಷಿಪ್ ಮೂಲಕ ಆಸ್ಟ್ರಿಯಾಕ್ಕೆ ಹೋದಾಗ್ಲೂ ಚಹಾ ಮಾಡುತ್ತಿದ್ದೆ. ಇದು ಜನರನ್ನು ಒಗ್ಗೂಡಿಸಲು ಸಹಕಾರಿಯಾಗಿದೆ'' ಅಂತಾ ಉಪ್ಮಾ ಖುಷಿಯಿಂದ ಹೇಳಿಕೊಳ್ತಾರೆ.

ಉಪ್ಮಾ ಅವರ ಚಹಾ ವ್ಯಾಪಾರ ಸಾಕಷ್ಟು ವೃದ್ಧಿಸಿದ್ದು ಈಗ ಆನ್​ಲೈನ್ ಮಳಿಗೆಯನ್ನೂ ತೆರೆದಿದ್ದಾರೆ. ಅಲ್ಲಿ ವೆರೈಟಿ ವೆರೈಟಿ ಟೀ ಜೊತೆಗೆ ಮೇಣದಬತ್ತಿ, ಮಡಿಕೆ, ಕೆಟಲ್ಸ್, ಸ್ಟ್ರೇನರ್​ಗಳು ಮತ್ತು ಚಹಾದಿಂದ್ಲೇ ತಯಾರಿಸಿದ ಚಾಕಲೇಟ್ ಕೂಡ ಸಿಗುತ್ತದೆ. ಇವುಗಳಿಗೆಲ್ಲ ಗ್ರಾಹಕರಿಂದ ಬಹುಬೇಡಿಕೆಯಿದೆ. ಆಗಾಗ ಉಪ್ಮಾ, ಚಹಾ ತಯಾರಿಕೆ ಬಗ್ಗೆ ಕಾರ್ಯಾಗಾರವನ್ನೂ ಏರ್ಪಡಿಸುತ್ತಾರೆ. ಆಸಕ್ತರಿಗೆಲ್ಲ ಘಮಘಮಿಸುವ ರುಚಿಯಾದ ಚಹಾ ತಯಾರಿಸುವುದು ಹೇಗೆ ಅನ್ನೋದನ್ನು ಕಲಿಸಿಕೊಡುತ್ತಾರೆ.

ಚಂಡೀಗಢ ಮೂಲದ ಉಪ್ಮಾ ಈಗ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ನಡೆದ ಚಹಾ ಉತ್ಸವಕ್ಕೂ ಅವರನ್ನು ಆಹ್ವಾನಿಸಲಾಗಿತ್ತು. ವಿಶ್ವದಾದ್ಯಂತ ಭಾರತದ ಅದ್ಭುತ ಚಹಾವನ್ನು ಪರಿಚಯಿಸುವುದು ಉಪ್ಮಾ ಅವರ ಉದ್ದೇಶ. ಒಟ್ಟಿನಲ್ಲಿ ತಾತನಿಂದ ಗಿಡಮೂಲಿಕೆಗಳ ಚಹಾ ತಯಾರಿಕೆಯನ್ನು ಕರಗತ ಮಾಡಿಕೊಂಡಿರುವ ಉಪ್ಮಾ ದೂರದ ಆಸ್ಟ್ರೇಲಿಯಾದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಭಾರತೀಯ ಆಹಾರ ಪದ್ಧತಿಯನ್ನು ಎಲ್ಲೆಡೆ  ಪರಿಚಯಿಸುತ್ತಿದ್ದಾರೆ.  

ಇದನ್ನೂ ಓದಿ..

ಕ್ಯಾಬ್​ ಸೇವೆಗಳಲ್ಲಿ ಬಿಗ್​ ಫೈಟ್​-OLAಕ್ಕೆ ಅಗ್ರಪಟ್ಟದ ತವಕ- ಉಬರ್​ಗೆ ಸವಾಲು ಎದುರಿಸುವುದೇ ಕಾಯಕ

15,000 ಯುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟ ಉದ್ಯಮಿ..