ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ 

ಟೀಂ ವೈ.ಎಸ್.ಕನ್ನಡ 

1

ವಯಸ್ಸು ಅನ್ನೋದು ಕೇವಲ ಸಂಖ್ಯೆ ಅಷ್ಟೆ ಅನ್ನೋ ಮಾತಿದೆ. 95ರ ಹರೆಯದ ಅನ್ನಾಕುಟ್ಟಿ ಸಿಮೊನ್ ಅವರೇ ಇದಕ್ಕೆ ಜೀವಂತ ನಿದರ್ಶನ. ಈ ಇಳಿವಯಸ್ಸಿನಲ್ಲೂ ವಿಶ್ವ ಸುತ್ತುತ್ತಿರುವ ಸಾಹಸಿ ಮಹಿಳೆ ಈಕೆ. ಈಗಾಗ್ಲೇ ಇಟಲಿ, ಜರ್ಮನಿ, ಇಸ್ರೇಲ್, ಫ್ರಾನ್ಸ್ ಮತ್ತು ಯುಎಇಗೆ ಹೋಗಿ ಬಂದಿದ್ದಾರೆ. ಸದ್ಯದಲ್ಲೇ ಜೆರುಸೆಲಂಗೆ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ. ಅನ್ನಾಕುಟ್ಟಿ ಸಿಮೊನ್ ಗೆ 20 ಮೊಮ್ಮಕ್ಕಳಿದ್ದಾರೆ. ಯಾವಾಗಲೂ ಸಾಂಪ್ರದಾಯಿಕ ಧಿರಿಸು ಮುಂಡು ಉಟ್ಕೊಳ್ಳೋದ್ರಿಂದ ಅನ್ನಾಕುಟ್ಟಿ ಎಲ್ಲರ ಗಮನ ಸೆಳೆಯುತ್ತಾರೆ. ಜಗತ್ತಿನ ಯಾವ ಮೂಲೆಗೆ ಹೋದ್ರೂ ಅನ್ನಾಕುಟ್ಟಿ ಬೇರೆ ತೆರನಾದ ಬಟ್ಟೆಗಳನ್ನು ಹಾಕೋದಿಲ್ಲ. ಕಿವಿಯಲ್ಲಿ ದೊಡ್ಡದಾದ ರಿಂಗ್ ಹಾಕಿಕೊಂಡಿರೋ ಅಮ್ಮಾಚಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದು.

ಅನ್ನಾಕುಟ್ಟಿ ಜನಿಸಿದ್ದು ಕೊಟ್ಟಾಯಂನಲ್ಲಿ. ಇಡುಕ್ಕಿ ಜಿಲ್ಲೆಯ ಕುನಿಂಜಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಒಂಟಿಯಾಗಿ ಪ್ರಯಾಣ ಮಾಡೋದು ಅಮ್ಮಾಚಿಗೆ ಇಷ್ಟ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೆಲ್ಲ ಸೇರಿ ಅವರ ಕುಟುಂಬದಲ್ಲಿ ಸುಮಾರು 70 ಮಂದಿ ಇದ್ದಾರೆ. ಅನ್ನಾಕುಟ್ಟಿಗೆ ಮಲಯಾಳಂ ಬಿಟ್ರೆ ಬೇರೆ ಭಾಷೆ ಗೊತ್ತಿಲ್ಲ. ಅಂಥದ್ರಲ್ಲಿ ವಿದೇಶಗಳಿಗೆ ಒಂಟಿಯಾಗಿ ಹೇಗೆ ಪ್ರವಾಸ ಮಾಡ್ತಾರೆ ಅನ್ನೋದೇ ಅಚ್ಚರಿಯ ಸಂಗತಿ.

ವಯಸ್ಸು 95 ಆಗಿದ್ದರೂ ಅನ್ನಾಕುಟ್ಟಿ ಗಟ್ಟಿಮುಟ್ಟಾಗಿದ್ದಾರೆ. ಯಾವುದೇ ಖಾಯಿಲೆ, ಕಸಾಲೆ, ವಯೋಸಹಜ ಸಮಸ್ಯೆಗಳಿಲ್ಲ. ಸುಮಾರು 50 ವರ್ಷಗಳ ಹಿಂದೆಯೇ ಅನ್ನಾಕುಟ್ಟಿ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಜಗತ್ತಿನ ಮೂಲೆ ಮೂಲೆಯನ್ನೂ ಸುತ್ತಬೇಕು ಅನ್ನೋದು ಅವರ ಆಸೆ. ಆದ್ರೆ ಆಕೆಯ ವಯಸ್ಸು ನೋಡಿ ವೀಸಾ ಅಧಿಕಾರಿಗಳು ಎಷ್ಟೋ ದೇಶಗಳಿಗೆ ಕಳುಹಿಸಲು ಒಪ್ಪಿಲ್ಲ. ಆದ್ರೂ ಅನ್ನಾಕುಟ್ಟಿ ಅವರಲ್ಲಿ ಪ್ರವಾಸದ ಉತ್ಸಾಹ ಮಾತ್ರ ತಣ್ಣಗಾಗಿಲ್ಲ.

ಅನ್ನಾಕುಟ್ಟಿ 1997ರಲ್ಲಿ ಜರ್ಮನಿಗೆ ಮೊದಲ ಪ್ರವಾಸ ಮಾಡಿದ್ದರು. ಆಗ ಅವರಿಗೆ 75 ವರ್ಷ ವಯಸ್ಸು. ಪ್ರಾಥಮಿಕ ಶಿಕ್ಷಣ ಮುಗಿಸಿರುವ ಅನ್ನಾಕುಟ್ಟಿ, ಕೃಷಿಯಲ್ಲೂ ಪಳಗಿದ್ದಾರೆ. ನರ್ಸಿಂಗ್ ಕೂಡ ಅವರಿಗೆ ಗೊತ್ತು. ಪ್ರವಾಸ ಹೊರತುಪಡಿಸಿದ್ರೆ ಇದೇ ಅವರ ನೆಚ್ಚಿನ ಹವ್ಯಾಸ. ಅನ್ನಾಕುಟ್ಟಿ ಕೊಟ್ಟಾಯಂನ ಕನಂಕೊಂಬಿಲ್ ಕುಟುಂಬಕ್ಕೆ ಸೇರಿದವರು. ತಂದೆ ತಾಯಿಗೆ ಅನ್ನಾಕುಟ್ಟಿ 10ನೇ ಸಂತಾನ. 1936ರಲ್ಲಿ ಅಂದ್ರೆ 14 ವರ್ಷದವರಿದ್ದಾಗ್ಲೇ ಪೆಂದನಾಥು ಸಿಮೊನ್ ಜೊತೆಗೆ ಅನ್ನಾಕುಟ್ಟಿ ವಿವಾಹ ನೆರವೇರಿತ್ತು.

ಒಟ್ಟು 12 ಸಹೋದರ ಸಹೋದರಿಯರ ಪೈಕಿ ಅನ್ನಾಕುಟ್ಟಿಯವರ ತಂಗಿ ಮರಿಯಾಕುಟ್ಟಿ ಮಾತ್ರ ಈಗ ಬದುಕಿದ್ದಾರೆ. ಕೇರಳದ ಕೋಜಿಕ್ಕೋಡ್ ನಲ್ಲಿ ನೆಲೆಸಿದ್ದಾರೆ. ಅನ್ನಾಕುಟ್ಟಿ ಅವರ ಸಾಹಸಗಾಥೆ ಇಷ್ಟಕ್ಕೇ ಮುಗೀತು ಅಂದ್ಕೋಬೇಡಿ. ಅವರು ಇತ್ತೀಚೆಗಷ್ಟೆ ಮಲಯಾಳಂನ 'Aby' ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೃದ್ಧಾಪ್ಯದಲ್ಲೂ ಚುರುಕಾಗಿ ಓಡಾಡುತ್ತ ಪ್ರಪಂಚ ಸುತ್ತುವ ಅಮ್ಮಾಚಿಯ ಉತ್ಸಾಹವನ್ನು ಮೆಚ್ಚಲೇಬೇಕು.  

ಇದನ್ನೂ ಓದಿ...

ಗಾನ ನೃತ್ಯದ "ಆರಾಧನ" ಅಪರ್ಣಾ 

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಜೋಕೇ..!

Related Stories

Stories by YourStory Kannada