ಹೈ-ವೇನಲ್ಲೇ ಡಾಬಾಕ್ಕೆ ಹೋಗಬೇಕಿಲ್ಲ- ಸಿಟಿಗೂ ಎಂಟ್ರಿಯಾಗಿದೆ..! 

ಟೀಮ್​ ವೈ.ಎಸ್​. ಕನ್ನಡ

1

ಸ್ಟಾರ್ಟ್​ಅಪ್​ ದುನಿಯಾದಲ್ಲಿ ಉದ್ಯಮಗಳು ದೊಡ್ಡ ಸದ್ದು ಮಾಡುತ್ತಿವೆ. ಭಾರತದಲ್ಲಿ ಮೆಡಿಕಲ್​, ಟೆಕ್ನಿನಲ್​​ ಉದ್ಯಮಗಳ ಜೊತೆಗೆ ಆಹಾರೋದ್ಯಮಗಳು ಯಶಸ್ಸಿನ ಹಾದಿ ಹಿಡಿಯುತ್ತವೆ. ಉದ್ಯಮ ಚಿಕ್ಕದಾಗಿ ಆರಂಭವಾದರೂ, ಅದನ್ನು ಯಶಸ್ಸಿನ ಕಡೆ ಮುನ್ನುಗ್ಗಿಸಬೇಕಾದ ಐಡಿಯಾಗಳು ಹುಟ್ಟಿಕೊಳ್ಳುತ್ತಿವೆ.  ಸಾಮಾನ್ಯವಾಗಿ ಆಹಾರೋದ್ಯಮಗಳು ಆರಂಭವಾಗುವುದು ಚಿಕ್ಕ ವ್ಯಾಪ್ತಿಯಿಂದಲೇ. ಆದ್ರೆ ಇತ್ತೀಚಿನ ದಿನಗಳಲ್ಲಿ  ಅವುಗಳು ವೇಗವಾಗಿ ಬೆಳೆಯುತ್ತಿವೆ. ಅದರಲ್ಲೂ ಹೊಟೇಲ್​​ಗಳ ಸಂಖ್ಯೆ ಮತ್ತು ವ್ಯಾಪ್ತಿ ದೊಡ್ಡದಾಗುತ್ತಿದೆ.  ಗ್ರಾಹಕರನ್ನು ಸೆಳೆಯಲು ವಿಭಿನ್ನ ಪ್ಲಾನ್​ಗಳನ್ನು ವರ್ಕೌಟ್​ ಮಾಡಲಾಗುತ್ತದೆ. ಆಫರ್​ಗಳ ಬೆನ್ನಲ್ಲೇ, ವಿನ್ಯಾಸ ಮತ್ತು ಆಕರ್ಷಕ ರುಚಿ ಹೊಟೇಲ್​ ಉದ್ಯಮದ ಯಶಸ್ಸಿನ ಗುಟ್ಟು ಅನ್ನುವುದರಲ್ಲಿ ಎರಡು ಮಾತಿಲ್ಲ.  ಆ್ಯಂಬಿಯನ್ಸ್​, ಅಟ್​ಮೊಸ್ಪಿಯರ್​ ಮತ್ತು ಅಟೆನ್ಷನ್​ ಆಹಾರೋದ್ಯಮದ ಯಶಸ್ಸಿನ ಹಿಂದಿರುವ ಮೂರು ಮಂತ್ರಗಳು ಅನ್ನುವುದು ಆ ಕ್ಷೇತ್ರದ ಉದ್ಯಮಿಗಳ ಅನುಭವದ ಮಾತು. 

ರಾಜ್ಯದಲ್ಲಿ ಸಾಕಷ್ಟು ಡಾಬಾಗಳಿವೆ. ಹೈ-ವೇನಲ್ಲಿ ಒಂದು ಲಾಂಗ್​ ಡ್ರೈವ್​​ ಹೋದರೆ ಸಾಕು. ರಸ್ತೆಯುದ್ದಕ್ಕೂ ಡಾಬಾಗಳದ್ದೇ ಕಾರುಬಾರು. ಪಂಜಾಬ್​ನಲ್ಲಿ ಹುಟ್ಟಿದ್ದ ಡಾಬಾ ಸಂಸ್ಕೃತಿ ಈಗ ಭಾರತದ ಎಲ್ಲೆಡೆಯೂ ಇದೆ.  ಆದರೆ ಅವುಗಳಲ್ಲಿ ಸಾಕಷ್ಟು ಒರಿಜಿನಲ್ ಡಾಬಾಗಳಾಗಿರುವುದಿಲ್ಲ ಎಂಬುದೇ ಸತ್ಯದ ಸಂಗತಿ. ಆದರೂ ನಮಗೆ ಆ ಬೋರ್ಡ್ ಕಂಡಾಕ್ಷಣ ಅತ್ತ ಹೋಗಬೇಕು ಎನಿಸುತ್ತದೆ. ಅಲ್ಲಿಗೆ ಹೋಗಿ ಚೆನ್ನಾಗಿ ತಿನ್ನಬೇಕು ಎಂದು ಆಸೆಯಾಗುತ್ತದೆ. ಆದರೆ ಬೆಂಗಳೂರಿನ ಸಿಟಿ ಒಳಗಡೆ ಡಾಬಾ ಒಂದು ಆರಂಭವಾಗಿದ್ದು, ಅದು ಥೇಟ್ ಡಾಬಾದಂತೆಯೆ ಕಾರ್ಯನಿರ್ವಹಿಸುತ್ತದೆ.

" ಹೈವೇಗಳಲ್ಲಿನ ಈ ಪಂಜಾಬಿ ಅಡುಗೆ ಮನೆಯನ್ನು ಮೆಟ್ರೊಪಾಲಿಟನ್ ಮಂದಿಗೆ ಪರಿಚಯಿಸುವ ಉದ್ದೇಶದಿಂದ ಈ ಡಾಬಾವನ್ನು ಆರಂಭಿಸಿದ್ದೇವೆ. ಆಹಾರಪ್ರಿಯರಿಗೆ ಇದೊಂದು ಹೊಸ ಅನುಭವ ನೀಡುತ್ತದೆ"
- ರಾಹುಲ್ ಖನ್ನಾ, ಡಾಬಾ ಹೊಟೇಲ್ ಮಾಲೀಕ

ದೂರ ಪ್ರಯಾಣದ ಸಂದರ್ಭಗಳಲ್ಲಿ ರಸ್ತೆ ಬದಿ ಡಾಬಾಗಳನ್ನು ನೋಡಿರುತ್ತೀರಿ. ಅದರತ್ತ ಕಣ್ಣು ಹಾಯಿಸುವುದು ಮಾತ್ರವಲ್ಲದೆ ಅಲ್ಲಿ ದೊರೆಯುವ ರುಚಿಕರ ಬಿಸಿ ಬಿಸಿ ರೋಟಿ, ಚಪಾತಿ, ದಾಲ್, ಕೆನೆಭರಿತ ಲಸ್ಸಿ ಮುಂತಾದ ನಾರ್ತ್ಇಂಡಿಯನ್ ಖಾದ್ಯಗಳನ್ನು, ಅದರಲ್ಲೂ ಪಂಜಾಬಿ ಕೈಯಡುಗೆಯನ್ನು ನೆನೆಸಿಕೊಂಡು ಬಾಯಲ್ಲಿ ನೀರೂರಿಸಿಕೊಂಡಿರುತ್ತೀರಿ. ಆದರೆ ಈ ಆಸೆಗೆ ಮನಸೋತು ಗಾಡಿ ನಿಲ್ಲಿಸಿ ರುಚಿ ಸವಿದಾಗ ನಿಮಗೆ ನಿರಾಸೆಯಾಗುವಂತೆ ನಿಮ್ಮ ಕಲ್ಪನೆಯ ರುಚಿ ಅಲ್ಲಿ ಸಿಕ್ಕಿರುವುದಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ರಸ್ತೆ ಬದಿಯಲ್ಲಿ ಡಾಬಾ ಎಂದು ಬೋರ್ಡು ತಗುಲಿಸಿಕೊಂಡ ಎಲ್ಲ ಹೊಟೇಲ್​ಗಳು ನಿಜಕ್ಕೂ ಡಾಬಾಗಳಾಗಿರುವುದಿಲ್ಲ ಎನ್ನುವ ಸಂಗತಿ.

ಬೆಂಗಳೂರಿನಲ್ಲಿ ಪಂಜಾಬಿ ಸ್ಟೈಲ್​​ನಲ್ಲಿ ಖಾದ್ಯಗಳು ಸಿಗುವ ಅದೆಷ್ಟೋ ಹೊಟೇಲ್​ಗಳು ರೆಸ್ಟೋರೆಂಟ್ ನಮಗೆ ಸಿಗುತ್ತವೆ. ವೀಕೆಂಡ್​ಗಳಲ್ಲಿ ಅವುಗಳ ರುಚಿಕಂಡಿದ್ದೂ ಉಂಟು. ಅವುಗಳಲ್ಲಿ ಇಂಡಿಯನ್ ಖಾದ್ಯಗಳು ವೆಸ್ಟರ್ನ್​ಖಾದ್ಯಗಳೊಂದಿಗೆ ಬೆರೆತು ಬೇರೆಯದೇ ರುಚಿ ನೀಡುತ್ತವೆ. ಆಹಾರವೇನೋ ಇಷ್ಟವಾಗಿ ಬಿಡುತ್ತದೆ. ಆದ್ರೆ ಅಲ್ಲಿ ಅಚ್ಚ ಪಂಜಾಬಿ ಶೈಲಿಯ ಖಾದ್ಯ ಸಿಗುವುದಿಲ್ಲ ಎನ್ನುವ ಬೇಜಾರು.  ಇದೆಲ್ಲದಕ್ಕೂ ಪೂರ್ಣವಿರಾಮ ಹಾಕುಲು ಅನ್ನುವಂತೆ  ಬೆಂಗಳೂರಿನಲ್ಲಿ ಒಂದು ಡಾಬಾ ಹೋಟೆಲ್ ಪ್ರಾರಂಭವಾಗಿದೆ.

ವಿಭಿನ್ನ ಶೈಲಿಯ ಓಳಾಂಗಣ

ಪಂಜಾಬ್​​ನಲ್ಲಿ ಹೈವೇ ಪಕ್ಕದಲ್ಲಿರುವ ಪ್ರತಿ ಡಾಬಾಗಳಿಗೂ ಲಾರಿ ಡ್ರೈವರ್​ಗಳೇ ಪ್ರಮುಖ ಗ್ರಾಹಕರು. ಲಾರಿ ಡ್ರೈವರ್​ಗಳು ಪಕ್ಕಾ ಪಂಜಾಬಿ ದಿರಿಸಿನಲ್ಲಿ ಬಿದಿರು ಮಂಚದ ಮೇಲೆ ಆಸೀನರಾಗಿ ಅಗಲ ತಟ್ಟೆ ತುಂಬಾ ರೋಟಿ, ದಾಲ್, ಲಸ್ಸಿ ಮೆಲ್ಲುವುದು ಸಾಮಾನ್ಯವಾದ ದೃಶ್ಯ. ಬೆಂಗಳೂರಿನ ಈ ಡಾಬಾ ಹೋಟೆಲ್​ಗೆ  ಬಂದರೆ ನಿಮಗೂ ಆ ಅನುಭವವಾಗುತ್ತದೆ. ಏಕೆಂದರೆ ಈ ಹೋಟೆಲ್ ಹೆಸರಿಗೆ ಮಾತ್ರ ಡಾಬಾ ಅಲ್ಲ. ತನ್ನ ಹೆಸರಿಗೆ ಅನ್ವರ್ಥವಾಗುವಂತೆ ಹೋಟೆಲಿನ ಒಳಾಂಗಣ ಕೂಡಾ ಹೈವೇಗಳಲ್ಲಿನ ಡಾಬಾವನ್ನು ನೆನಪಿಸುತ್ತದೆ.

" ಈ ಹೊಟೇಲ್​ಗೆ ಬಂದರೆ ಪಂಜಾಬ್​ಗೆ ಹೋದಂತೆ ಆಗುತ್ತದೆ. ಇಲ್ಲಿ ಸಿಗುವ ಖಾದ್ಯಗಳು ಬೇರೆಲ್ಲೂ ಸಿಗುವುದಿಲ್ಲ. ಒಂದೊಳ್ಳೆ ಅನುಭವ ಮತ್ತು ಮನಸ್ಸಿಗೆ ಇಷ್ಟವಾಗುವ ರುಚಿ ಇಲ್ಲಿಗೆ ಬಂದರೆ ಸಿಗುತ್ತದೆ."
- ರಾಜೇಶ್, ಗ್ರಾಹಕ

60ಜನಕ್ಕೆ ಮಾತ್ರ ಜಾಗ

ಬೆಂಗಳೂರಿನ ಇಂದಿರಾನಗರದಲ್ಲಿ ಆರಂಭವಾಗಿರುವ ಈ ಡಾಬದಲಿ ಒಮ್ಮೆಗೆ ಸುಮಾರು 60 ಮಂದಿ ಕುಳಿತುಕೊಂಡು ಊಟ ಮಾಡಬಹುದು. ಇಲ್ಲಿ ವೆಜ್ ಮತ್ತು ನಾನ್​ವೆಜ್ ಎರಡೂ ಪ್ರಕಾರದ ಖಾದ್ಯಗಳು ದೊರೆಯುತ್ತವೆ. ಅಲ್ಲದೇ ಪಕ್ಕಾ ಪಂಜಾಬಿನ ಶೈಲಿಯಲ್ಲಿರುವುದರಿಂದ ಆಹಾರಪ್ರಿಯರ ಬಾಯಲ್ಲಿ ನೀರೂರಿಸುವುದು ಖಂಡಿತ. ಇಲ್ಲಿನ ಅಡುಗೆ ಮನೆಯಲ್ಲಿ ತವಾ, ತಂದೂರ್ ಮತ್ತು ಪಟಿಯಾಲ ಎಂದು ಪ್ರತ್ಯೇಕ ವಿಭಾಗಗಳೇ ಇವೆ. ಹಾಗಾಗಿ ಇಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅವರ ಬೇಡಿಕೆಯನುಸಾರವಾಗಿ ಆಹಾರಗಳನ್ನು ಸಿದ್ಧಪಡಿಸಲಾಗುತ್ತದೆ.

ಏನೇನು ಸಿಗುತ್ತದೆ

ಪಾಲಕ್ ಪನ್ನೀರ್ ಕಿ ಸೀಖ್, ಡಾಬೆ ದಿ ಆಲೂ ಗೋಬಿ, ಚಿಟ್ಟಾ ಬಟರ್ ಚಿಕನ್, ಅಮೃತ್ಸರೀ ಕುಕ್ಕಡ್, ಮಿಸ್ಸೀ ತಂದೂರಿ ಪರಾಠಾ, ತಂದೂರಿ ಮಟನ್ ಚಾಪ್ಸ್, ಢಾಬಾ ಪ್ರಾನ್ಸ್, ಡಾಬಾ ದಾಲ್ ಸೇರಿದಂತೆ ಹಲವು ವೈವಿಧ್ಯಮಯಖಾದ್ಯಗಳು ಇಲ್ಲಿ ದೊರೆಯುತ್ತವೆ.

ಬಗೆ ಬಗೆಯ ಶರಬತ್ತು

ಹೈವೆ ಡಾಬಾಗಳಲ್ಲಿ ಬಗೆ ಬಗೆಯ ಶರಬತ್ತುಗಳು ದೊರೆಯುತ್ತವೆ. ಅದೇ ರೀತಿ ಈ ಡಾಬಾದಲ್ಲಿಯೂ ತೂಫಾನ್, ಸೋಮ್ರಸ್, ಬಸಂತಿ, ಲಾಲ್ ಪರಿ ಅನ್ನೂ ಅನೇಕ ವಿಭಿನ್ನ ರುಚಿಯ ಶರಬತ್ತುಗಳು ಸಿಗುತ್ತವೆ. ಒಟ್ಟಿನಲ್ಲಿ ಡಾಬಾದಲ್ಲಿ ಊಟ ಮಾಡಬೇಕು ಅನ್ನುವವರಿಗೆ ಇದು ಹೊಸ ಅನುಭವ. ಅಷ್ಟೇ ಅಲ್ಲ ಸಿಟಿಯೊಳಗೆ ಇದು ಆರಂಭವಾಗಿರುವುದು ಮತ್ತೊಂದು ಖುಷಿಯ ವಿಚಾರ.

ಇದನ್ನು ಓದಿ:

1. ಗಾನ ನೃತ್ಯದ "ಆರಾಧನ" ಅಪರ್ಣಾ 

2. ಡಿಜಿಟಲ್​ ಲೆಕ್ಕದಲ್ಲಿ ಹಿಂದೆ ಬಿದ್ದ ಭಾರತ- ಮೋದಿ ಕನಸಿಗೆ ಪೆಟ್ಟು ಕೊಡುತ್ತಿದೆ ಹಾರ್ಡ್​ಕ್ಯಾಶ್​..!

3. ನಮ್ಮ ಮೆಟ್ರೋದ ಪಿಲ್ಲರ್​ಗಳಿಗೆ ಹೊಸ ಜೀವ- ಹೊಸ ತಂತ್ರಜ್ಞಾನದ ಮೂಲಕ ಪರಿಸರ ಕಾಯುವ ಕೆಲಸ
Related Stories