ಕನ್ನಡ ಚಿತ್ರರಂಗಕ್ಕೆ ಕಾರ್ಪೊರೇಟ್ ಎಂಟ್ರಿ!

ಟೀಮ್​ ವೈ.ಎಸ್​. ಕನ್ನಡ

ಕನ್ನಡ ಚಿತ್ರರಂಗಕ್ಕೆ ಕಾರ್ಪೊರೇಟ್ ಎಂಟ್ರಿ!

Friday July 08, 2016,

2 min Read

ಹಿಂದಿ ಚಿತ್ರರಂಗದಲ್ಲಿ ಬಹುತೇಕ ಸಿನಿಮಾಗಳೊಂದಿಗೆ ಕಾರ್ಪೊರೇಟ್ ಕಂಪನಿಗಳು ಕೈಜೋಡಿಸಿರುತ್ತವೆ. ಕಳೆದ ಕೆಲ ವರ್ಷಗಳಿಂದೀಚೆಗೆ ದಕ್ಷಿಣದ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಿಗೂ ಕಾರ್ಪೊರೇಟ್ ಕಂಪನಿಗಳು ಕಾಲಿಟ್ಟಿವೆ. ಆದರೆ ಕನ್ನಡ ಚಿತ್ರರಂಗಕ್ಕೆ ಮಾತ್ರ ಇದುವರೆಗೆ ಯಾವುದೇ ಕಾರ್ಪೊರೇಟ್ ಕಂಪನಿ ಎಂಟ್ರಿ ಕೊಟ್ಟಿರಲಿಲ್ಲ. ಸ್ಯಾಂಡಲ್‍ವುಡ್‍ನಲ್ಲಿ ಈ ವರ್ಷ ಮೊದಲ ಆರು ತಿಂಗಳಲ್ಲೇ ಬರೊಬ್ಬರಿ 100 ಸಿನಿಮಾಗಳು ರಿಲೀಸ್ ಆಗಿದ್ದು, ಗೆಲುವಿನ ಶೇಕಡಾವಾರು ಕೂಡ ಕಳೆದ ಐದಾರು ವರ್ಷಗಳಲ್ಲೆ ಅತೀ ಹೆಚ್ಚಿದೆ. ಹೀಗೆ ಗಾಂಧಿನಗರದಲ್ಲಿ ಹೊಸ ಶಖೆ ಆರಂಭವಾಗಿರುವುದು ಕಂಡು ಬರುತ್ತಿದ್ದಂತೆಯೇ, ಕಾರ್ಪೊರೇಟ್ ಕಂಪನಿಗಳೂ ಇತ್ತ ಮುಖ ಮಾಡಿವೆ. ಇದೇ ಮೊದಲ ಬಾರಿಗೆ ಕಂಪನಿಯೊಂದು ಕನ್ನಡ ಚಿತ್ರದೊಂದಿಗೆ ಗುರುತಿಸಿಕೊಂಡಿದೆ. ನಿರ್ಮಾಣದಲ್ಲಿ ಕೈ ಜೋಡಿಸಿದೆ.

image


ದ್ವಾರಕೀಶ್ ಚಿತ್ರಕ್ಕೆ 50, ತರುಣ್ ಕಿಶೋರ್‍ಗೆ ಮೊದಲನೆಯದು..!

ಚೌಕ. ಕರ್ನಾಟಕದ ಕುಳ್ಳ ದ್ವಾರಕೀಶ್ ಅವರ ದ್ವಾರಕೀಶ್ ಚಿತ್ರ ಬ್ಯಾನರ್‍ನಲ್ಲಿ ಮೂಡಿಬರುತ್ತಿರುವ 50ನೇ ಸಿನಿಮಾ. ವಿದೇಶದಲ್ಲಿ ಶೂಟಿಂಗ್ ಮಾಡಿದ ಮೊದಲ ಕನ್ನಡ ಚಿತ್ರ, ಲಂಡನ್‍ನಲ್ಲಿ ರೀರೆಕಾರ್ಡಿಂಗ್ ಮಾಡಿದ ಮೊದಲ ಕನ್ನಡ ಚಿತ್ರ ಹೀಗೆ ಈ ಬ್ಯಾನರ್ ಸ್ಯಾಂಡಲ್‍ವುಡ್ ಮಟ್ಟದಲ್ಲಿ ಹಲವು ಮೊದಲುಗಳಿಗೆ ಕಾರಣವಾಗಿದೆ. ಹೀಗೆ ದ್ವಾರಕೀಶ್ ಅವರು ತಮ್ಮ ಬ್ಯಾನರ್ ಮೂಲಕ ಹಲವು ಸಾಧನೆಗಳನ್ನು ಮಾಡಿದ್ದಾರೆ. ಈಗ ಅವರ ಪುತ್ರ ಯೋಗೀಶ್ ದ್ವಾರಕೀಶ್, ನಾನೂ ಏನಾದರೂ ಒಂದನ್ನು ಮೊದಲು ಮಾಡಿರುವ ಸಾಧನೆ ಮಾಡಬೇಕು ಅಂತ ಇದೇ ಮೊದಲ ಬಾರಿಗೆ ಕಾರ್ಪೊರೇಟ್ ಕಂಪನಿಯ ಸಹಕಾರದೊಂದಿಗೆ ಸಿನಿಮಾ ನಿರ್ಮಿಸಿದ್ದಾರೆ. ವಿಶೇಷ ಅಂದರೆ ‘ಚೌಕ’, ದಿವಂಗತ ನಟ ಸುಧೀರ್ ಅವರ ಪುತ್ರ ತರುಣ್ ಕಿಶೋರ್ ನಿರ್ದೇಶಿಸುತ್ತಿರುವ ಮೊದಲ ಚಿತ್ರವೂ ಹೌದು.

ಇದನ್ನು ಓದಿ: "ತಿಥಿ"ಫೇಮಸ್ ಆಗಿದ್ದು ಹೇಗೆ ಗೊತ್ತಾ..? ಸೆಕ್ಯುರಿಟಿ ಗಾರ್ಡ್​ನ ಕಥೆಗೆ ಸಿಕ್ತು ನ್ಯೂ ಲುಕ್​...!

ಬ್ಯಾಗ್‍ಪೈಪರ್ ಸೋಡಾ ಕುರಿತು

ಬ್ಯಾಗ್‍ಪೈಪರ್ ಸೋಡಾ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‍ನ ಮುಂಚೂಣಿಯ ಬ್ರಾಂಡ್ ಆಗಿದ್ದು, ಕಳೆದ ಮೂರು ದಶಕಗಳಿಂದ ಬ್ರಾಂಡ್ ಸಂವಹನದಲ್ಲಿ ಮುಂಚೂಣಿಯಲ್ಲಿದೆ. ಜನಪ್ರಿಯ ಸಂಸ್ಕೃತಿಯಾದ ಭಾರತೀಯ ಚಲನಚಿತ್ರಗಳೊಂದಿಗೆ ಸಂಯೋಜನೆ ಹೊಂದಿದೆ. ಅಕ್ಷಯ್ ಕುಮಾರ್, ಶಾರುಖ್ ಖಾನ್, ಅಜಯ್ ದೇವಗನ್, ಸನ್ನಿ ಡಿಯೋಲ್, ಶತ್ರುಘ್ನ ಸಿನ್ಹಾ ಸೇರಿದಂತೆ ಇನ್ನೂ ಹಲವು ಬಾಲಿವುಡ್ ಸೂಪರ್‍ಸ್ಟಾರ್‍ಗಳೊಂದಿಗೆ ಸಹಯೋಗ ಹೊಂದಿದೆ. ಈ ಹಿಂದೆ ‘ಸತ್ಯಾಗ್ರಹ್’, ‘ದಬಂಗ್’ ಹಾಗೂ ‘ಸನ್ ಆಫ್ ಸರ್ದಾರ್’ ಅಂತಹ ಸೂಪರ್‍ಹಿಟ್ ಹಿಂದಿ ಚಿತ್ರಗಳೊಂದಿಗೆ ಸಹಯೋಗ ಹೊಂದಿತ್ತು.

image


‘ಚೌಕ’ ಚಿತ್ರದ ಕುರಿತು

‘ಚೌಕ’ ಚಿತ್ರದಲ್ಲಿ ಕನ್ನಡದ ಸ್ಟಾರ್‍ಗಳಾದ ವಿಜಯ್ ರಾಘವೇಂದ್ರ, ಲವ್ಲಿ ಸ್ಟಾರ್ ಪ್ರೇಮ್, ದೂದ್‍ಪೇಡಾ ದಿಗಂತ್ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿದ್ದಾರೆ. 1986, 1995, 200 ಹಾಗೂ 2008ರಲ್ಲಿ ಒಬ್ಬೊಬ್ಬ ನಾಯಕನ ಒಂದೊಂದು ಕಥೆ ನಡೆಯಲಿದ್ದು, ಆ ನಾಲ್ಕೂ ಕಥೆ ಗಳು ಮತ್ತು ನಾಯಕರು 2016ರಲ್ಲಿ ಒಂದೆಡೆ ಬಂದು ಸೇರುತ್ತಾರೆ. ಅದು ಹೇಗೆ? ಏಕೆ? ಎಂಬುದು ಸದ್ಯ ಸಸ್ಪೆನ್ಸ್. 5 ಸಂಗೀತ ನಿರ್ದೇಶಕರು, 5 ಛಾಯಾಗ್ರಾಹಕರು, 5 ಕಲಾ ನಿರ್ದೇಶಕರು ಹಾಗೂ 5 ಸಂಭಾಷಣೆಕಾರರು ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಮತ್ತೊಂದು ವಿಶೇಷತೆ. ಒಟ್ಟಾರೆ ಇನ್ನೊಂದು ತಿಂಗಳಲ್ಲಿ ‘ಚೌಕ’ ಚಿತ್ರೀಕರಣ ಮುಗಿಯಲಿದ್ದು, ದಸರಾ ಹಬ್ಬದ ಒಳಗೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಗಳಿವೆ.

ಹೇಗಿರಲಿದೆ ಬ್ಯಾಗ್‍ಪೈಪರ್ ಸಹಭಾಗಿತ್ವ?

ಯುನೈಟೆಡ್ ಸ್ಪಿರಿಟ್ಸ್‍ನ ಜನಪ್ರಿಯ ಬ್ರ್ಯಾಂಡ್ ಬ್ಯಾಗ್‍ಪೈಪರ್ ಸೋಡಾ ಮತ್ತು ದ್ವಾರಕೀಶ್ ಚಿತ್ರ ‘ಚೌಕ’ ಚಿತ್ರಕ್ಕಾಗಿ ವಿನೂತನ ಪಾಲುದಾರಿಕೆ ರೂಪಿಸಿಕೊಂಡಿವೆ. ಚೌಕ ಚಿತ್ರದ ಟಿವಿ ಅಥವಾ ದಿನಪತ್ರಿಕೆ ಇರಬಹುದು ಅಥವಾ ಬ್ಯಾನರ್, ಬಂಟಿಂಗ್ಸ್, ಎಫ್‍ಎಂ ಯಾವುದೇ ಬಗೆಯ ಜಾಹೀರಾತಾಗಿದ್ದರೂ ಎಲ್ಲೆಡೆ ‘ಚೌಕ’ ಚಿತ್ರದೊಂದಿಗೆ ಹಾಗೂ ದ್ವಾರಕೀಶ್ ಚಿತ್ರದ ಬ್ಯಾನರ್ ಜತೆಗೆ ಬ್ಯಾಗ್‍ಪೈಪರ್ ಸೋಡಾ ಬ್ರ್ಯಾಂಡ್ ಲೇಬಲ್ ಸಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದೆ. ಹಾಗಂತ ಬ್ಯಾಗ್‍ಪೈಪರ್ ಸೋಡಾ ಬ್ರ್ಯಾಂಡ್‍ನವರು ನಿರ್ಮಾಪಕರಿಗೆ ಇಂತಿಷ್ಟು ದುಡ್ಡು ಅಂತ ಕೊಟ್ಟು ಕೈ ತೊಳೆದುಕೊಳ್ಳುವುದಿಲ್ಲ. ಬದಲಾಗಿ ಚಿತ್ರದ ಕಂಟೆಂಟ್, ಪ್ರಚಾರ ಹಾಗೂ ಬಾಕ್ಸಾಫೀಸ್ ಸಾಧನೆಯಲ್ಲು ಸಕ್ರಿಯ ಪಾಲುದಾರನಾಗಿದೆ. 

ಇದನ್ನು ಓದಿ: 

1.ಎಟಿಎಂ ಕಾರ್ಡ್​ ಇಲ್ದೇ ಇದ್ರೂ ಹಣ ಡ್ರಾ ಮಾಡಬಹುದು..!

2. ಕಿರಿಕಿರಿ ಮುಕ್ತವಾಗಲಿದೆ ಬೆಂಗಳೂರು ಟ್ರಾಫಿಕ್- ಇದು ನಮ್ಮ ಮೆಟ್ರೋದ ಮ್ಯಾಜಿಕ್​​

3. ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..