ಕೊನೆಗೂ ಹಸನಾಯ್ತು ಗೋಲ್ಗಪ್ಪಾ ಮಾರುತ್ತಿದ್ದ ಒಲಿಂಪಿಯನ್ ಬದುಕು..!  

ಟೀಮ್ ವೈ.ಎಸ್.ಕನ್ನಡ 

1

2011ರ ಅಥೆನ್ಸ್ ಸ್ಪೆಷಲ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಾಗ ಸೀತಾ ಸಾಹುಗೆ ಕೇವಲ 15 ವರ್ಷ. ಮಧ್ಯಪ್ರದೇಶದ ಸೀತಾ 200 ಮತ್ತು 4X400 ಮೀಟರ್ ರಿಲೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದ ಅಥ್ಲೀಟ್. ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸೀತಾಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದ ಮಧ್ಯಪ್ರದೇಶ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ. ಪ್ರತಿಭಾವಂತ ಕ್ರೀಡಾಪಟುವಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. 

ಸೀತಾ ಬಡ ಕಾರ್ಮಿಕ ಕುಟುಂಬದವಳು, ಅವರ ಕುಟುಂಬದ ದಿನದ ದುಡಿಮೆ 150-180 ರೂಪಾಯಿ. ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರಿಂದ ಸೀತಾಗೆ ಶಿಕ್ಷಣ ಗಗನಕುಸುಮವಾಯ್ತು. ಆಕೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಬೇಕಾಯ್ತು. ಮನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಸೀತಾ ತನ್ನ ಒಡಹುಟ್ಟಿದವರು ಮತ್ತು ತಂದೆಗಾಗಿ ದುಡಿಯಲು ಶುರು ಮಾಡಿದ್ಲು. ತಾಯಿಯ ಜೊತೆಗೆ ಬೀದಿಯಲ್ಲಿ ಕುಳಿತು ಗೋಲ್ಗಪ್ಪಾ ಮಾರಲು ಆರಂಭಿಸಿದ್ಲು.

``ಸೀತಾ ಒಲಿಂಪಿಕ್ಸ್ ಪದಕ ಗೆದ್ದ ಮೇಲೆ ಸರ್ಕಾರ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿತ್ತು. ಅದಕ್ಕಾಗಿ ಕಾಯುತ್ತಿದ್ದ ಸೀತಾ ಮತ್ತಾಕೆಯ ಕುಟುಂಬದವರು ಮಾತು ತಪ್ಪಿದ ಸರ್ಕಾರದ ವರ್ತನೆಯಿಂದ ನೊಂದಿದ್ದಾರೆ. ಅದನ್ನೆಲ್ಲ ಹೇಳಿ ಪ್ರಯೋಜನವಿಲ್ಲ'' ಎನ್ನುತ್ತಾರೆ ಸೀತಾಳ ತರಬೇತುದಾರರು ಹಾಗೂ ರೇವಾದ ಶಿಕ್ಷಕಿ ಉಷಾ ಸಾಹು. ಈ ವಿಚಾರ 2013ರಲ್ಲಿ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಚರ್ಚೆಯಾಯ್ತು. ಬಳಿಕ ಎಚ್ಚೆತ್ತುಕೊಂಡ ಮಧ್ಯಪ್ರದೇಶ ಸರ್ಕಾರ ಕೊಟ್ಟ ಮಾತಿನಂತೆ ಸೀತಾಗೆ ನಗದು ಬಹುಮಾನವನ್ನು ನೀಡಿದೆ. ಜೊತೆಗೆ ನ್ಯಾಶನಲ್ ಥರ್ಮಲ್ ಪವರ್ ಕಾರ್ಪೊರೇಷನ್ ನೀಡಿದ 6 ಲಕ್ಷ ರೂಪಾಯಿ ನಗದು ಬಹುಮಾನದಿಂದಾಗಿ ಸೀತಾಳ ಕನಸು ನನಸಾಗಿದೆ.

ಸೀತಾ ಮತ್ತಾಕೆಯ ಒಡಹುಟ್ಟಿದವರು ಮತ್ತೆ ಶಾಲೆಗೆ ಹೋಗಲು ಆರಂಭಿಸಿದ್ರು. ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾಳ ತಂದೆ ಕೂಡ ಒಳ್ಳೆಯ ಚಿಕಿತ್ಸೆ ದೊರೆತು ಚೇತರಿಸಿಕೊಂಡ್ರು. ರಸ್ತೆಬದಿಯಲ್ಲಿ ನಿಂತು ಗೋಲ್ಗಪ್ಪಾ ಮಾರುತ್ತಿದ್ದ ತಾಯಿ, ಈಗ ಚಿಕ್ಕ ಅಂಗಡಿಯೊಂದನ್ನು ಶುರುಮಾಡಿದ್ದಾರೆ. ಬ್ಯುಸಿನೆಸ್ ಕೂಡ ಚೆನ್ನಾಗಿ ನಡೀತಿದೆ. ``ನಾವು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ವಿ. ಇದೆಲ್ಲ ಸಾಧ್ಯವಾಗಬಹುದು ಎಂಬ ಕಲ್ಪನೆಯೂ ನಮಗಿರಲಿಲ್ಲ. ನಮ್ಮ ಬದುಕು ಹಸನಾಗಲು ಕಾರಣ ಮಗಳು ಸೀತಾ. ಎಲ್ಲ ಶ್ರೇಯಸ್ಸು ಅವಳಿಗೆ ಸಲ್ಲಬೇಕು'' ಅಂತಾ ತಾಯಿ ಕಿರಣ್ ಸಾಹು ಹೆಮ್ಮೆಯಿಂದ ಹೇಳಿಕೊಳ್ತಾರೆ.

ತಾಳ್ಮೆ, ಶ್ರಮ ಇವೆರಡು ಇದ್ರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಸೀತಾ ಸಾಹು ಉತ್ತಮ ಉದಾಹರಣೆ. ಧೃತಿಗೆಡದೆ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ಸೀತಾಗೆ ಈಗ ಹೊಸ ಬದುಕು ಸಿಕ್ಕಿದೆ. ಮತ್ತೆ ಶಿಕ್ಷಣ ಮುಂದುವರಿಸುವ ಅವಕಾಶ ದಕ್ಕಿದೆ. ಈ ಪ್ರತಿಭಾವಂತ ಕ್ರೀಡಾಪಟು ದೇಶಕ್ಕೆ ಇನ್ನಷ್ಟು ಪ್ರಶಸ್ತಿ ಹಾಗೂ ಗೌರವವನ್ನು ತರಲಿ ಅನ್ನೋದೇ ಎಲ್ಲರ ಆಶಯ.

"ಸ್ಮಾರ್ಟ್"​ ಆಗೋದಿಕ್ಕೆ ಇನ್ನೇನು ಬೇಕು..?- ಶರ್ಟ್​ನಲ್ಲೇ ಸಿಗುತ್ತೆ ಟೆಕ್ನಾಲಜಿಯ ಕಿಕ್​

ಬೇಡವಾದ ಔಷಧಗಳನ್ನು ಸಂಗ್ರಹಿಸುತ್ತಾರೆ - ದೆಹಲಿಯಲ್ಲೊಬ್ಬ “ಮೆಡಿಸಿನ್ ಬಾಬಾ”