ಎರಡು ಬಾರಿ ಕ್ಯಾನ್ಸರ್ ಗೆದ್ದ ಗಟ್ಟಿಗಿತ್ತಿ ನೀಲಂ ಕುಮಾರ್

ಟೀಮ್​ ವೈ.ಎಸ್​. ಕನ್ನಡ

ಎರಡು ಬಾರಿ ಕ್ಯಾನ್ಸರ್ ಗೆದ್ದ ಗಟ್ಟಿಗಿತ್ತಿ ನೀಲಂ ಕುಮಾರ್

Friday February 12, 2016,

5 min Read

ನನ್ನ ಮೆದುಳಲ್ಲಿ ಮಿನುಗಿದ ಕ್ಷಿಪ್ರ ಕನಸಿನಿಂದ ಒಂದು ಮುಂಜಾನೆ 4 ಗಂಟೆಗೆ ನನಗೆ ಎಚ್ಚರವಾಯ್ತು. ಆ ಕನಸಿನ ಕೆಲ ತುಣುಕುಗಳು ನನಗಿನ್ನೂ ನೆನಪಿದೆ. ಪುಟ್ಟ ಬಾಲೆಯೊಬ್ಬಳು ರಷ್ಯಾದ ಕಾಡಿನಲ್ಲಿ ಸ್ಟ್ರಾಬೆರಿ ತಿನ್ನುತ್ತಿದ್ದಳು. ದಿ ಗ್ರೇಟ್ ಖುಷ್ವಂತ್ ಸಿಂಗ್ ಮಹಿಳೆಯ ಕೆನ್ನೆ ಮೇಲೆ ಮುತ್ತಿಕ್ಕಲು ಹೋದಂತೆ ಕಂಡಿತು. ಇನ್ನು ಆ ಬಾಲಕಿ ಕಪ್ಪು ಸಮುದ್ರದಲ್ಲಿ ಈಜುತ್ತಿದ್ಲು. ಬ್ರೆಸ್ಟ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಆ ಮಹಿಳೆ ಕಿಮೋಥೆರಪಿಗೆ ಒಳಗಾಗುತ್ತಿದ್ಲು. ಇನ್ನೊಬ್ಬ ಮಹಿಳೆ ಕಾರ್ಯಕ್ರಮವೊಂದರಲ್ಲಿ ಉತ್ತೇಜನಕಾರಿ ಭಾಷಣ ಮಾಡುತ್ತಿದ್ಲು. ಇನ್ನೊಬ್ಬ ಮಹಿಳೆ ನಮ್ ಮ್ಯೋಹೋ ರೆಂಗೆ ಕ್ಯೋ ಎಂದು ಹಾಡುತ್ತಿದ್ಲು. ಆಗ ನನಗೆ ದಿಢೀರನೆ ಎಚ್ಚರವಾಗಿತ್ತು, ನನಗೆ ಕನಸಿನಲ್ಲಿ ಕಾಡಿದ್ದು ನೀಲಂ ಕುಮಾರ್ ಅವರ ಬದುಕಿನ ಕಹಾನಿ. ಆಗ್ಲೇ ನಾನು ಈ ಲೇಖನವನ್ನು ಬರೆದೆ.

image


`ಸ್ಟ್ರಾಬೆರಿ ವರ್ಷಗಳು'

ನೀಲಂ ರಷ್ಯಾದಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. ಅವರು ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆಲ್ಲ ಮಾಸ್ಕೋದಲ್ಲಿ. ಆ ದಿನಗಳನ್ನವರು ಸ್ಟ್ರಾಬೆರಿ ಇಯರ್ಸ್ ಎಂದು ಕರೆಯುತ್ತಾರೆ. ರಷ್ಯಾದ ಶಾಲೆಗಳಲ್ಲಿ ತರಗತಿಯಲ್ಲಿ ಓದಲು ಪುಸ್ತಕಗಳಿರಲಿಲ್ಲ, ಆಗಾಗ ಮಕ್ಕಳನ್ನು ಹತ್ತಿರದ ಕಾಡಿಗೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿ ಎಲ್ಲರೂ ಸ್ಟ್ರಾಬೆರಿ ಹಣ್ಣುಗಳನ್ನು ಸವಿಯುತ್ತಿದ್ರು. ಬೇಸಿಗೆಯಲ್ಲಿ ಮೂರು ತಿಂಗಳು ಅವರನ್ನೆಲ್ಲ ಅನಾಪಾ ಅನ್ನೋ ರೆಸಾರ್ಟ್‍ಗೆ ಕರೆದೊಯ್ಯಲಾಗಿತ್ತು. ಕಪ್ಪು ಸಮುದ್ರದಲ್ಲಿ ಈಜಾಡುತ್ತ ಎಲ್ಲರೂ ಸೀ ಶೆಲ್‍ಗಳನ್ನು ಆಯ್ದುಕೊಳ್ತಾ ಇದ್ರು. ಈಜು ಕಲಿಯುತ್ತ ಸನ್ ಬಾತ್ ಮಾಡುತ್ತ ಎಂಜಾಯ್ ಮಾಡ್ತಾ ಇದ್ರು. 6 ವರ್ಷಗಳ ಕಾಲ ನಾವು ಪುಸ್ತಕದಿಂದ ಏನನ್ನೂ ಕಲಿತಿಲ್ಲ, ಪ್ರಕೃತಿಯಿಂದ್ಲೇ ಎಲ್ಲವನ್ನೂ ಕಲಿತಿದ್ದೇವೆ ಎನ್ನುತ್ತಾರೆ ನೀಲಂ.

ಇದನ್ನು ಓದಿ

ಲೇಟ್​​ನೈಟ್.ಇನ್ ವೆಬ್​​ಸೈಟ್​​ನಲ್ಲಿ ಮಿಡ್​​ನೈಟ್ ಭೋಜನ..!

ಬಳಿಕ ಭಾರತಕ್ಕೆ ಮರಳಿದ ನೀಲಂರನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲಾಯ್ತು. ನೀಲಂ ಮಂದ ಬುದ್ಧಿಯ ವಿದ್ಯಾರ್ಥಿನಿ ಎಂದೇ ಶಿಕ್ಷಕರು ಪರಿಗಣಿಸಿದ್ರು. ಇಂಗ್ಲಿಷ್ ಭಾಷೆಯನ್ನು ಕಲಿಯಲು ಅವರಿಂದ ಸಾಧ್ಯವೇ ಇಲ್ಲ ಎಂದುಕೊಂಡಿದ್ರು. ಇದು ನೀಲಂ ಅವರ ಪಾಲಿಗೆ ಸ್ಪೂರ್ತಿದಾಯಕವಾಗಿ ಸಾಬೀತಾಯ್ತು. ``ಅವರಂದುಕೊಂಡಿದ್ದು ತಪ್ಪೆಂದು ಸಾಬೀತು ಮಾಡಲು ನಾನು ಜೀವನಪೂರ್ತಿ ಶ್ರಮಪಟ್ಟಿದ್ದೇನೆ, 5 ಪುಸ್ತಕಗಳನ್ನು ಇಂಗ್ಲಿಷ್‍ನಲ್ಲೇ ಬರೆದಿದ್ದೇನೆ. ಇಂಗ್ಲಿಷ್ ಲಿಟರೇಚರ್‍ನಲ್ಲಿ ಪದವಿ ಪಡೆದಿರುವ ನಾನು, ಪಬ್ಲಿಕ್ ರಿಲೇಶನ್ ಮತ್ತು ಅಡ್ವರ್ಟೈಸಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಅಮೆರಿಕದ ಯೂನಿವರ್ಸಿಟಿ ಆಫ್ ಅರಿಝೋನಾದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಮಾಸ್ಟರ್ಸ್ ಕೂಡ ಪೂರೈಸಿದ್ದೇನೆ'' ಅಂತಾ ನೀಲಂ ಸಂತಸದಿಂದ ಹೇಳಿಕೊಳ್ತಾರೆ.

image


ಕಠಿಣ ವರ್ಷಗಳು...

1996ರಲ್ಲಿ ನೀಲಂ ಅವರ ಬದುಕೇ ಬದಲಾಗಿತ್ತು. ಅವರು ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ ಎಂಬ ಕಹಿ ಸತ್ಯ ಗೊತ್ತಾಗಿತ್ತು. ``ಈ ಮಹಾಮಾರಿಯನ್ನು ಎದುರಿಸಲು ನನ್ನ ಬಳಿ ಯಾವುದೇ ಅಸ್ತ್ರವಿರಲಿಲ್ಲ. ಆಗ ನಾನೊಂದು ರೀತಿ ಸಿನಿಕತನದ ಮಹಿಳೆಯಾಗಿದ್ದೆ, ಅಯ್ಯೋ ಕ್ಯಾನ್ಸರ್ ನನಗೇ ಯಾಕೆ ಬಂತು ಎಂದು ಯೋಚನೆಗೊಳಗಾಗಿದ್ದೆ'' ಎನ್ನುತ್ತಾರೆ ನೀಲಂ. ಅದರು ಅವರ ಜೀವನದ ಅತ್ಯಂತ ಕಠಿಣ ಸಮಯವಾಗಿತ್ತು. ಅವರಿಗೆ ಪ್ರೇರಣೆಯಾಗಿದ್ದ, ಸ್ಪೂರ್ತಿಯ ಸೆಲೆಯಾಗಿದ್ದ ಪತಿಯನ್ನು ಕೂಡ ನೀಲಂ 1993ರಲ್ಲಿ ಕಳೆದುಕೊಂಡ್ರು. ಒಬ್ಬ ವಿಧವೆಯಾಗಿ, ಮಕ್ಕಳನ್ನು ಒಂಟಿಯಾಗಿ ಬೆಳೆಸಬೇಕಾಗಿತ್ತು. ಹಣಕಾಸಿನ ಕೊರತೆ, ಸಂಬಂಧಗಳ ಕುಸಿತ ಹೀಗೆ ಹತ್ತಾರು ಸವಾಲುಗಳು ಧುತ್ತನೆ ಎದುರಾಗಿದ್ದವು. ಈ ಸಂದರ್ಭದಲ್ಲಿ ಅವರು ದೃಢವಾಗಿ ನಿಲ್ಲಲು ಕಾರಣರಾದವರು ಮಕ್ಕಳಾದ ರಂಜೀಲ್ ಮತ್ತು ಅಭಿಲಾಷಾ. ಒಡಹುಟ್ಟಿದವರು, ಅವರ ಸಂಗಾತಿಗಳು, ಸ್ನೇಹಿತರು, ಅಜ್ಜಿ, ಚಿಕಿತ್ಸೆ ಸಂದರ್ಭದಲ್ಲಿ ಆರೈಕೆ ಮಾಡಿದ ವೈದ್ಯರು ಹೀಗೆ ಹಲವರು ನೀಲಂ ಅವರ ಮರುಹುಟ್ಟಿಗೆ ಕಾರಣರಾದರು ಅಂದ್ರೂ ತಪ್ಪಿಲ್ಲ. ಟಾಟಾ ಮೆಮೋರಿಯಲ್ ಹಾಸ್ಪಿಟಲ್‍ನ ಡಾ.ರಾಜೇಂದ್ರ ಬಡ್ವೆ, ಪಿಡಿ ಹಿಂದುಜಾ ಹಾಸ್ಪಿಟಲ್‍ನ ಡಾ.ಮುಝಾಮಿಲ್ ಶೇಕ್, ಡಾ.ವಿನಯ್ ಆನಂದ್‍ರಂತಹ ಅದ್ಭುತ ವೈದ್ಯರು ಸರಿಯಾದ ಸಮಯಕ್ಕೆ ದೊರೆತಿದ್ದು ತಮ್ಮ ಅದೃಷ್ಟ ಎನ್ನುತ್ತಾರೆ ನೀಲಂ. ಕ್ಯಾನ್ಸರ್ ಮೆಟ್ಟಿನಿಲ್ಲಲು ತಮ್ಮಲ್ಲಿ ಧೈರ್ಯ ತುಂಬಿದ್ದೇ ಅವರು ಅಂತಾ ನೀಲಂ ಹೇಳ್ತಾರೆ.

image


ಒಮ್ಮೆ ಸಂಪೂರ್ಣ ಗುಣಮುಖರಾದ್ರೂ ಅವರ ಸಂಕಷ್ಟಗಳು ಮಾತ್ರ ಕೊನೆಯಾಗಲಿಲ್ಲ. 2013ರಲ್ಲಿ ಮತ್ತೆ ನೀಲಂ ಅವರನ್ನು ಸ್ತನ ಕ್ಯಾನ್ಸರ್ ಆವರಿಸಿತ್ತು. ಆದ್ರೆ ಈ ಬಾರಿ ಅವರು ಅದನು ಎದುರಿಸಲು ತಯಾರಾಗಿದ್ರು. ``ಈ ಬಾರಿ ಕ್ಯಾನ್ಸರ್ ವಿರುದ್ಧ ವಿಭಿನ್ನ ಹೋರಾಟ ನಡೆಸಬೇಕೆಂದು ನಾನು ನಿರ್ಧರಿಸಿದ್ದೆ. ನಿರಿಶೆನ್ ಬೌದ್ಧ ತತ್ವಶಾಸ್ತ್ರವನ್ನು ಅಂಗೀಕರಿಸಿದ್ದ ನಾನು, ನನ್ನ ಜೀವನದ ಅಣುರೂಪ ಜಾಲರಿಯನ್ನು ಬ್ರಹ್ಮಾಂಡದ ಸಮಷ್ಟಿಯ ಜೊತೆ ಮುನ್ನಡೆಸಲು ತೀರ್ಮಾನ ಮಾಡಿದ್ದೆ. ನಮ್ ಮ್ಯೋಹೋ ರೆಂಗೆ ಕ್ಯೋ ಅನ್ನೋ ಶಬ್ಧಗಳು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬಿದವು. ನನ್ನ ಅನಾರೋಗ್ಯ ಆಹ್ಲಾದಕರವಾಯ್ತು'' ಅಂತಾ ಹಳೆ ನೆನಪುಗಳನ್ನವರು ಮೆಲುಕು ಹಾಕಿದ್ದಾರೆ.

`ಕ್ಯಾನ್ಸರ್ ವಿಜಯಿ'

ತಮ್ಮನ್ನು ತಾವು ಕ್ಯಾನ್ಸರ್‍ನಿಂದ ಬದುಕುಳಿದಾಕೆ ಎನ್ನುವುದಕ್ಕಿಂತ ಕ್ಯಾನ್ಸರ್ ವಿಜಯಿ ಎಂದು ಕರೆದುಕೊಳ್ಳಲು ನೀಲಂ ಇಚ್ಛಿಸುತ್ತಾರೆ. ಅವರು ಅತ್ಯಂತ ಧನಾತ್ಮಕ ವ್ಯಕ್ತಿ. ``ಎರಡು ಬಾರಿ ಕ್ಯಾನ್ಸರ್‍ಗೆ ತುತ್ತಾಗುವುದಕ್ಕಿಂತ ಅದ್ಭುತ ವಿಷಯ ಇನ್ನೇನಿದೆ? ನನಗೆ ದೊರೆತ ಗಿಫ್ಟ್‍ಗಳೆಡೆಗೆ ನಾನು ನೋಡುತ್ತೇನೆ, ಹೊಸ ಜೀವಕೋಶಗಳು, ಸಾಗರ, ಸಮುದ್ರದ ಆಳ, ಒಮದು ರೀತಿಯ ಸಹಾನುಭೂತಿ ಮತ್ತು ವಿಶಾಲ ದೃಷ್ಟಿಕೋನ ಆವರಿಸಿದೆ. ನಮ್ಮೊಳಗೆ ಮಾನವ ಕ್ರಾಂತಿಯಾದ್ರೆ ನಮ್ಮ ಮಾಂಸದ ಮೂಲಕವೇ ಅದ್ಭುತ ಸಂಪನ್ಮೂಲಗಳು ಹೊರಹೊಮ್ಮುತ್ತವೆ'' ಅನ್ನೋದು ಅವರ ಅನುಭವದ ಮಾತು.

`ಮರೆಯಲಾಗದ ನೀಲಂ'

1996ರಲ್ಲಿ ಜೆಮ್‍ಶೆಡ್‍ಪುರದಲ್ಲಿ ನಡೆದ ರೋಟರಿ ಕ್ಲಬ್ ಕಾನ್ಫರೆನ್ಸ್‍ನಲ್ಲಿ ನೀಲಂ ಕುಮಾರ್, ಖುಷ್ವಂತ್ ಸಿಂಗ್‍ರನ್ನು ಭೇಟಿಯಾದ್ರು. ಖುಷ್ವಂತ್ ಅವರ ಬರವಣಿಗೆ ಹಾಗೂ ವ್ಯಕ್ತಿತ್ವದ ಬಗ್ಗೆ ಪರಿಚಯ ಮಾಡಿಕೊಡುವ ಅವಕಾಶ ನೀಲಂ ಅವರಿಗೆ ಲಭಿಸಿತ್ತು. ಆದ್ರೆ ಸಾರ್ವಜನಿಕ ಜೀವನದಲ್ಲಿ ಖುಷ್ವಂತ್ ಸಿಂಗ್ ಅಷ್ಟೇನೂ ಪ್ರಿಯವಾದಂತಹ ಇಮೇಜ್ ಹೊಂದಿರಲಿಲ್ಲ. ಆ ಕಾರ್ಯಕ್ರಮದಲ್ಲಿ ನೀಲಂ ಅವರ ಕೆನ್ನೆಗೆ ಖುಷ್ವಂತ್ ಚುಂಬಿಸಿದ್ರು. ಈ ವಿಚಾರ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯ್ತು. `ವಿತ್ ಮಲೈಸ್ ಟುವಡ್ರ್ಸ್ ವನ್ & ಆಲ್' ಕಾಲಮ್‍ನಲ್ಲಿ ಖುಷ್ವಂತ್ ಸಿಂಗ್ ಕೂಡ `ಅನ್‍ಫೊರ್ಗೆಟೇಬಲ್ ನೀಲಂ' ಎಂಬ ಲೇಖನವನ್ನು ಬರೆದ್ರು. ನೀಲಂ ಅವರ ಬರವಣಿಗೆ ಮತ್ತು ಮಾತನಾಡುವ ಕಲೆಯನ್ನು ಮೆಚ್ಚಿಕೊಂಡ್ರು. ಹೀಗೆ ನೀಲಂ ಮತ್ತು ಖುಷ್ವಂತ್ ಸಿಂಗ್ ಅವರ ಕುಟುಂಬದ ಮಧ್ಯೆ ಸ್ನೇಹ ಬೆಳೆದಿತ್ತು. ಇವರು ಜೊತೆಯಾಗಿ `ಅವರ್ ಫೇವರಿಟ್ ಇಂಡಿಯನ್ ಸ್ಟೋರಿಸ್' ಎಂಬ ಪುಸ್ತಕವನ್ನು ಬರೆದಿದ್ದಾರೆ. ಭಾರತದಾದ್ಯಂತ ಪ್ರಯಾಣ ಮಾಡಿ ಅವರು ಈ ಪುಸ್ತಕ ಬರೆದಿದ್ದಾರೆ, ಇದಕ್ಕಾಗಿ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಭಾರತದ ಜನಪ್ರಿಯ ಲೇಖಕನ ಬಳಿ ಇಂಗ್ಲಿಷ್ ಬರವಣಿಗೆಯನ್ನು ಕಲಿಯುವ ಅವಕಾಶ ನೀಲಂ ಅವರಿಗೆ ಲಭಿಸಿತ್ತು.

ಫಲಪ್ರದ ಬರವಣಿಗೆ

ತಮ್ಮ ಬದುಕಿನ ಕಥೆಯನ್ನೇ ನೀಲಂ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. `ಟು ಕ್ಯಾನ್ಸರ್ ವಿತ್ ಲವ್-ಮೈ ಜರ್ನಿ ಆಫ್ ಜೊಯ್' ಪುಸ್ತಕದಲ್ಲಿ ತಮ್ಮ ಜೀವನವನ್ನು ತೆರೆದಿಟ್ಟಿದ್ದಾರೆ. ಎರಡನೇ ಬಾರಿ ಸ್ತನ ಕ್ಯಾನ್ಸರ್‍ಗೆ ತುತ್ತಾದಾಗ ನೀಲಂ ದುರಂತ ಅಂತ್ಯವಿರುವ ಕೆಲ ಪುಸ್ತಕಗಳನ್ನು ಓದಿದ್ರು. ರ್ಯಾಂಡಿ ಪಾಶ್ ಅವರ `ಇನ್ ದಿ ಲಾಸ್ಟ್ ಲೆಕ್ಚರ್', ಮಿಚ್ ಆಲ್ಬಮ್ ಅವರ `ಟ್ಯೂಸ್‍ಡೇ ವಿತ್ ಮೊರ್ರಿ', ಕೆನ್ ಗಿಲ್ಬರ್ ಅವರ `ಗ್ರೇಸ್ & ಗ್ರಿಟ್' ಪುಸ್ತಕಗಳು ಅವರಲ್ಲಿ ಆತ್ಮವಿಶ್ವಾಸ ತುಂಬಿದ್ವು. ಬದುಕಲೇಬೇಕೆಂದು ಪಣ ತೊಟ್ಟ ಅವರು ಪುಸ್ತಕ ಬರೆಯಲು ಆರಂಭಿಸಿದ್ರು. ನೀಲಂ ಒಟ್ಟು ಐದು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ `ಅವರ್ ಫೇವರಿಟ್ ಇಂಡಿಯನ್ ಸ್ಟೋರೀಸ್' ಹಾಗೂ `ಟು ಕ್ಯಾನ್ಸರ್ ವಿತ್ ಲವ್ - ಮೈ ಜರ್ನಿ ಆಫ್ ಜೊಯ್' ಅತಿ ಹೆಚ್ಚು ಮಾರಾಟವಾಗಿವೆ. ಉಳಿದ ಪುಸ್ತಕಗಳೆಂದ್ರೆ `ದಿ ಲೆಜೆಂಡರಿ ಲವರ್ಸ್ - 21 ಟೇಲ್ಸ್ ಆಫ್ ಅನ್‍ಎಂಡಿಂಗ್ ಲವ್', `ಮೈರಾ - ಲವ್..ಸೋಲ್ ಸಾಂಗ್..ಡೆತ್' ಮತ್ತು `ಐ, ಎ ವುಮನ್'.

ಸದಾ ಬ್ಯುಸಿ...

ಲೇಖಕಿಯಾಗಿ ಯಶಸ್ಸು ಕಂಡಿರುವ ನೀಲಂ ಕುಮಾರ್ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹತ್ತಾರು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈನ ಆರ್ ಎನ್ ಪೊದ್ದರ್ ಶಾಲೆಯಲ್ಲಿ ನೀಲಂ ಬದುಕುವ ಕಲೆ ಬಗ್ಗೆ ತರಬೇತಿ ನೀಡ್ತಾರೆ. ಅವರೊಬ್ಬ ಯಶಸ್ವಿ ಕಾರ್ಪೊರೇಟ್ ಟ್ರೇನರ್ ಕೂಡ ಹೌದು. . www.thetraininghub.com ಈ ವೆಬ್‍ಸೈಟ್ ಮೂಲಕ ನೀವು ಕೂಡ ಅವರನ್ನು ಸಂಪರ್ಕಿಸಬಹುದು. ಹಲವು ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ನೀಲಂ ಅವರನ್ನು ಆಹ್ವಾನಿಸಲಾಗಿತ್ತು. ಸರ್ವೈವರ್ಸ್ ಮೀಟ್ ಆಫ್ 200 ಬ್ರೆಸ್ಟ್ ಕ್ಯಾನ್ಸರ್ ಸರ್ವೈವರ್ಸ್ ಹಾಗೂ ಸರ್ವೈವರ್ಸ್ ಮೀಟ್ ಆಫ್ ರೇರ್ ಕ್ಯಾನ್ಸರ್ಸ್ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದ್ದಾರೆ. ``ನಾನು ಪ್ರೇಷಕ ಮಾತುಗಾರಳಾಗಿ ಆಗಮಿಸುತ್ತೇನೆ : ಪ್ರೇರಣೆ ಪಡೆದ ಮನುಷ್ಯಳಾಗಿ ಹೊರಹೋಗುತ್ತೇನೆ'' ಎನ್ನುತ್ತಾರೆ ಅವರು.

image


ಭರವಸೆ ಮತ್ತು ಆಕಾಂಕ್ಷೆಗಳು..

``ಕ್ಯಾನ್ಸರ್ ಚಿಕಿತ್ಸೆ ಎಲ್ಲರಿಗೂ ಲಭ್ಯವಾಗಬೇಕು, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು. ಆರಂಭದಲ್ಲೇ ಅದನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಹೇಳಬೇಕು. ಬೇರೆ ಬೇರೆ ನಗರಗಳಿಗೆ ತೆರಳಿ ಅಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದವರೊಂದಿಗೆ ಮಾತನಾಡಿ ಅವರನ್ನು ಹುರಿದುಂಬಿಸಲು ಬಯಸುತ್ತೇನೆ. ಆದ್ರೆ ಈ ಕಾರ್ಯಕ್ಕೆ ಪ್ರಾಯೋಜಕರ ಅಗತ್ಯವಿದ್ದು, ಯಾರೂ ಮುಂದೆ ಬರುತ್ತಿಲ್ಲ'' ಅನ್ನೋದು ನೀಲಂ ಅವರ ಬೇಸರದ ನುಡಿ.

ನಾವೆಲ್ಲ ನೀಲಂ ಅವರಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ. ನೀಲಂ ಅವರು ನಮಗಾಗಿ ನೀಡಿದ ಸಕಾರಾತ್ಮಕ ಸಂದೇಶದೊಂದಿಗೆ ನಾನು ಈ ಕಥೆಯನ್ನು ಮುಗಿಸುತ್ತೇನೆ : ``ಜೀವನ ನಿಮಗೆ ಯಾವಾಗಲೂ ಆಯ್ಕೆಗಳನ್ನು ನೀಡುತ್ತೆ. ನೀವು ನಿರುತ್ಸಾಹಿಯಾಗಿ ನಿಮ್ಮ ಸುತ್ತ ಮುತ್ತ ಇರುವವರನ್ನು ಶೋಚನೀಯ ಸ್ಥಿತಿಗೆ ದೂಡಬಹುದು ಅಥವಾ ಧೈರ್ಯದಿಂದ ಎಂತಹ ಸಂದರ್ಭವನ್ನಾದ್ರೂ ಎದುರಿಸಬಹುದು. ಕಠೋರ ಸ್ಥಿತಿಯಲ್ಲೂ ಹಗುರವಾದ ಭಾಗವಿರುತ್ತದೆ, ನೀವದನ್ನು ಗಮನಿಸಬೇಕಷ್ಟೆ. ಜೀವನ ಒಂದು ವರ್ತನೆ ಅನ್ನೋದು ನನ್ನ ಪ್ರಾಮಾಣಿಕ ಅಭಿಪ್ರಾಯ. ಅದನ್ನು ಆನಂದಿಸಲು ನಮ್ಮ ಗ್ರಹಿಕೆಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು. ನಾವು ಸಂತೋಷವಾಗಿರಲು, ಇತರರನ್ನು ಸಂತೋಷವಾಗಿಡಲು ಭೂಮಿ ಮೇಲೆ ಬಂದಿದ್ದೇವೆ. ಆದ್ರೆ ನಾವದನ್ನು ಮಾಡುತ್ತಿಲ್ಲ, ಸರಿಯಾದ ರೀತಿಯಲ್ಲಿ ಬದುಕುತ್ತಿಲ್ಲ.

ಲೇಖಕರು: ಸೌಮಿತ್ರ ಕೆ. ಚಟರ್ಜಿ

ಅನುವಾದಕರು: ಭಾರತಿ ಭಟ್

ಇದನ್ನು ಓದಿ

'ಮೇಕ್ ಇನ್ ಇಂಡಿಯಾ ವೀಕ್​'ನತ್ತ ಕರ್ನಾಟಕ ಸರ್ಕಾರದ ಚಿತ್ತ...

ಝಿರೋದಿಂದ ಕೋಟಿವರೆಗೆ.. ಇದು ವಿದ್ಯಾರ್ಥಿಗಳ ‘ಟೆಸ್ಟಮೆಂಟ್ ’ಸ್ಟೋರಿ..!

ಕರಾವಳಿಯಲ್ಲಿ ಬಯಲು ಸೀಮೆಯ ರುಚಿಗೆ ಡಿಮ್ಯಾಂಡ್!