ಸಿನಿಮಾ ತಾರೆಯರಿಗೆಲ್ಲ ಮಾದರಿ ಎವೆಲಿನ್ ಶರ್ಮಾರ ಸಮಾಜ ಸೇವೆ..! 

ಟೀಮ್ ವೈ.ಎಸ್.ಕನ್ನಡ 

0

'ಯಾರಿಯಾಂ', 'ಯೇ ಜವಾನಿ ಹೈ ದಿವಾನಿ' ಚಿತ್ರಗಳಲ್ಲಿ ನಟಿಸಿರುವ ಇಂಡೋ ಜರ್ಮನ್ ಬ್ಯೂಟಿ ಎವೆಲಿನ್ ಶರ್ಮಾ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಜನಪ್ರಿಯತೆ ಮತ್ತು ಗ್ಲಾಮರ್ ಎರಡೂ ಅವರಿಗೆ ಬಳುವಳಿಯಾಗಿ ಬಂದಿದೆ. ಆ ಸ್ಟಾರ್ ಪವರ್ ಬಳಸಿಕೊಂಡು ಜನಸೇವೆ ಮಾಡುವುದು ಅವರ ಉದ್ದೇಶ. ಬಾಲಿವುಡ್ ಜೊತೆಗಿನ ಅನುಬಂಧ, ಎನ್​ಜಿಓ ಆರಂಭಿಸುವ ಕನಸು ನನಸಾದ ಬಗೆ ಇವೆಲ್ಲವನ್ನೂ ಎವೆಲಿನ್ ಶರ್ಮಾ ಯುವರ್​ ಸ್ಟೋರಿ ಜೊತೆ ಹಂಚಿಕೊಂಡಿದ್ದಾರೆ.

ಭಾರತೀಯ ಸಂಪರ್ಕ

ಎವೆಲಿನ್ ಶರ್ಮಾರ ತಂದೆ ಭಾರತೀಯ, ತಾಯಿ ಜರ್ಮನಿಯವರು. ಈಕೆ ಹುಟ್ಟಿ ಬೆಳೆದಿದ್ದೆಲ್ಲ ಜರ್ಮನಿಯ ಪುಟ್ಟ ನಗರದಲ್ಲಿ. ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದೆಲ್ಲ ಫ್ರಾಂಕ್​ಫರ್ಟ್​ನಲ್ಲಿ. ಜರ್ಮನಿಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾಗ್ಲೇ ಅವರಿಗೆ ಮಾಡೆಲಿಂಗ್ ಜಗತ್ತು ಕೈಬೀಸಿ ಕರೆದಿತ್ತು. ಜರ್ಮನಿಯಲ್ಲೇ ಹುಟ್ಟಿ ಬೆಳೆದಿದ್ದರಿಂದ ತಾವೊಬ್ಬ ಜರ್ಮನ್ ಎಂಬ ಭಾವನೆ ಅವರಲ್ಲಿತ್ತು. ಆದ್ರೆ ಜಗತ್ತು ಸುತ್ತಲು ಶುರು ಮಾಡ್ತಿದ್ದಂತೆ ಎವೆಲಿನ್ ಅವರಲ್ಲಿದ್ದ ಈ ಭಾವನೆ ಕೂಡ ಬದಲಾಗಿ ಹೋಯ್ತು.

''ವಿವಿಧ ರಾಷ್ಟ್ರಗಳ ಸಂಸ್ಕøತಿ, ಸಂಪ್ರದಾಯಗಳ ಬಗ್ಗೆ ನಾನು ತಿಳಿದುಕೊಂಡೆ, ಆಗ ನನ್ನಲ್ಲಿದ್ದ ಭಾರತೀಯ ಮೂಲ ಕೂಡ ಜಾಗೃತವಾಯ್ತು. ವಿಭಿನ್ನ ಸಂಸ್ಕೃತಿ ಮತ್ತು ಭಾಷೆಗಳನ್ನು ಕಲಿಯಬೇಕೆಂಬ ಆಸಕ್ತಿ ನನ್ನಲ್ಲಿ ಸಹಜವಾಗಿಯೇ ಇತ್ತು. ಭಾರತಕ್ಕೆ ಬಂದು ನೆಲೆಸುತ್ತಿದ್ದಂತೆ ನಾನೊಬ್ಬ ಪಂಜಾಬಿ ಎಂಬ ಹೆಮ್ಮೆ ಮೂಡಿತು. ನಿಧಾನವಾಗಿ ಭಾರತದೊಂದಿಗೆ ಪ್ರೀತಿ ಬೆಳೆದುಬಿಡ್ತು'' 
- ಎವೆಲಿನ್ ಶರ್ಮಾ, ನಟಿ

ಭಾರತೀಯರ ಬದುಕು ಎವೆಲಿನ್​ಗೆ ನಿಧಾನವಾಗಿ ಪರಿಚಿತವಾಗ್ತಿತ್ತು. ಆದ್ರೆ ಅಷ್ಟರಲ್ಲಾಗ್ಲೇ ಅವರು ಇಲ್ಲಿನ ಬಡತನವನ್ನು ಕಣ್ಣಾರೆ ಕಂಡಿದ್ದರು. ಬಡವರಿಗೆ, ಅಸಹಾಯಕರಿಗೆ ನೆರವಾಗಬೇಕೆಂಬ ತುಡಿತವಿತ್ತು, ಆದ್ರೆ ಹೇಗೆ ಅನ್ನೋದು ಅರ್ಥವಾಗ್ತಿರಲಿಲ್ಲ. ಬಾಲಿವುಡ್​ನಲ್ಲಿ ನೆಲೆಯೂರುತ್ತಿದ್ದಂತೆ ಸ್ಟಾರ್​ಗಿರಿಯ ಪವರ್ ಮತ್ತು ಜನಪ್ರಿಯತೆಯನ್ನೂ ಎವೆಲಿನ್ ಶರ್ಮಾ ಅರ್ಥಮಾಡಿಕೊಂಡ್ರು. ತಮ್ಮ ಜನಪ್ರಿಯತೆಯನ್ನೇ ಬಂಡವಾಳವಾಗಿಸಿಕೊಂಡು ಚಾರಿಟಿ ಸಂಸ್ಥೆಯನ್ನು ತೆರೆಯಲು ಆಕೆ ನಿರ್ಧರಿಸಿದ್ರು. ''ನನ್ನ ಕೀರ್ತಿ ಮತ್ತು ಖ್ಯಾತಿಯನ್ನು ಯಾವುದಾದರೂ ಉದ್ದೇಶಕ್ಕೆ ಬಳಸಿಕೊಳ್ಳಲು ಬಯಸಿದ್ದೆ'' ಅನ್ನೋದು ಅವರ ಮನದಾಳದ ಮಾತು.

ಗ್ಲಾಮರ್ ಇಂಡಸ್ಟ್ರಿಯಲ್ಲಿರೋದ್ರಿಂದ ತಮ್ಮ ಅತ್ಯುತ್ತಮ ಆಯ್ಕೆ ಉಡುಪುಗಳ ವಿಭಾಗ ಎಂದುಕೊಂಡ ಎವೆಲಿನ್ ಶರ್ಮಾ, ಹೊಸ ಕನಸನ್ನು ಹುಟ್ಟುಹಾಕಿದ್ದರು. ಬಡಬಗ್ಗರಿಗಾಗಿ ಹಣ ಮತ್ತು ಬಟ್ಟೆಗಳನ್ನು ಸಂಗ್ರಹಿಸಲು ಈವೆಂಟ್ಗಳನ್ನು ಆಯೋಜಿಸಲಾರಂಭಿಸಿದರು. ಎವೆಲಿನ್​ಗೆ ಮೊದಲಿನಿಂದ್ಲೂ ಸಮಾಜ ಸೇವೆಯತ್ತ ಮನಸ್ಸು ಸೆಳೆಯುತ್ತಿತ್ತು ಅನ್ನೋದೇ ವಿಶೇಷ. ''ನಾನು ನನ್ನ ತಾಯಿಯಿಂದ ಸ್ಪೂರ್ತಿ ಪಡೆದಿದ್ದೇನೆ. ದಾನದ ಮಹತ್ವವನ್ನು ಅವರು ಯಾವಾಗಲೂ ತಿಳಿಸಿ ಹೇಳುತ್ತಿದ್ದರು. ಭಾರತಕ್ಕೆ ಬಂದಮೇಲೆ ಭೂಕಂಪ, ಪ್ರವಾಹ ಸಂತ್ರಸ್ತರ ಬವಣೆಯನ್ನು ನೋಡಿದೆ. ಎಲ್ಲರಿಗೂ ಸಹಾಯ ಮಾಡಬೇಕೆಂಬ ಹಂಬಲ ನನಗಾಗಿತ್ತು. ಅದು ಅಸಾಧ್ಯ ಎಂದಾದಾಗ ಎಲ್ಲರನ್ನು ಒಗ್ಗೂಡಿಸುವುದೇ ನನ್ನ ಮುಂದಿನ ಗುರಿಯಾಯ್ತು'' ಅಂತಾ ಎವೆಲಿನ್ ವಿವರಿಸಿದ್ದಾರೆ.

''ಸೀಮ್ಸ್ ಫಾರ್ ಡ್ರೀಮ್ಸ್''

ಎವೆಲಿನ್ ಸಮಾಜ ಸೇವೆಯನ್ನು ಮೊದಲು ಆರಂಭಿಸಿದ್ದು ನೇಪಾಳ ಭೂಕಂಪದಿಂದ. ಭೂಕಂಪ ಪೀಡಿತರಿಗೆ ಬೇಕಾದ ಬಟ್ಟೆಬರೆ ಸಂಗ್ರಹಕ್ಕಾಗಿ ಎವೆಲಿನ್ ಗ್ಲಾಮರ್ ಇಂಡಸ್ಟ್ರಿಯನ್ನು ಒಗ್ಗೂಡಿಸಿ ಹಣ ಮತ್ತು ಉಡುಪುಗಳನ್ನು ದಾನವಾಗಿ ಪಡೆದ್ರು. ಅವುಗಳನ್ನೆಲ್ಲ ಸಂತ್ರಸ್ತರಿಗೆ ವಿತರಿಸಿದ್ರು. ಎವೆಲಿನ್ ಅವರ ಕಳಕಳಿ ಅರ್ಥಮಾಡಿಕೊಂಡ ಬಾಲಿವುಡ್ ಹಾಗೂ ಫ್ಯಾಷನ್ ಜಗತ್ತು ಅವರಿಗೆ ಸೂಕ್ತವಾಗಿ ಸ್ಪಂದಿಸಿದೆ. ಖ್ಯಾತ ಫ್ಯಾಷನ್ ಡಿಸೈನರ್ಗಳಾದ ನಿಕ್ಷಾ ಲುಲ್ಲಾ, ವೆಂಡೆಲ್ ಡೋಡ್ರಿಕ್ಸ್, ಫಾಲ್ಗುಣಿ, ಶೇನ್ ಪಿಕಾಕ್, ಸಿನಿಮಾ&ಫ್ಯಾಷನ್ ಸ್ಟೈಲಿಸ್ಟ್​ಗಳು, ಸೆಲೆಬ್ರಿಟಿಗಳೆಲ್ಲ ಈ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಫಂಡ್ ರೈಸಿಂಗ್ ಜೊತೆಗೆ ಈ ಈವೆಂಟ್ಗಳು ಪ್ರತಿಭಾ ಪ್ರದರ್ಶನಕ್ಕೂ ವೇದಿಕೆಯಾಗಿವೆ. ಸದ್ಯ ಸೀಮ್ಸ್ ಫಾರ್ ಡ್ರೀಮ್ಸ್​ನಲ್ಲಿ 7 ಸದಸ್ಯರಿದ್ದಾರೆ, ಎವೆಲಿನ್ ಅದರ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಮುಂಬೈನಲ್ಲಿ ಎನ್​ಜಿಓದ ಮುಖ್ಯ ಕಚೇರಿಯಿದ್ದು, ಭಾರತದ ಇತರ ಲಾಭರಹಿತ ಸಂಸ್ಥೆಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ''ಇದರಿಂದ ನಮ್ಮ ದೃಷ್ಟಿಕೋನ ಇನ್ನಷ್ಟು ವಿಶಾಲವಾಗುತ್ತೆ'' ಎನ್ನುತ್ತಾರೆ ಎವೆಲಿನ್.

ಬಾಲಿವುಡ್ ಮತ್ತು ಚಾರಿಟಿ

ಎವೆಲಿನ್ ಈಗಷ್ಟೇ ಬಾಲಿವುಡ್ನಲ್ಲಿ ಗುರುತಿಸಿಕೊಳ್ತಿದ್ದಾರೆ. ಆದ್ರೂ ಸಮಾಜ ಸೇವೆಗಾಗಿ ಅಪಾರ ಸಮಯವನ್ನು ಮೀಸಲಾಗಿಡುತ್ತಿದ್ದಾರೆ. ಅದೇ ರೀತಿ ಉಳಿದವರು ಕೂಡ ಮಾಡಿದ್ರೆ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಉತ್ತಮವಾಗಲಿದೆ. 

"ಒಬ್ಬ ನಟರಾಗಿ ಹೆಚ್ಚು ಯಶಸ್ಸು ಗಳಿಸಿದಮೇಲೆ ಕಡಿಮೆ ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡೋದು ಸರ್ವೇಸಾಮಾನ್ಯ. ಹಾಗಾಗಿ ಬೇಕಾದಷ್ಟು ಫ್ರೀಟೈಮ್ ಇರುತ್ತೆ. ನಾನು ಕೂಡ ಸಮಯ ಸಿಕ್ಕಾಗ ರಜೆಯ ಮಜಾ ಅನುಭವಿಸಬಹುದು ಅಥವಾ ಪಾರ್ಟಿಗಳಿಗೆ ಹೋಗಬಹುದು. ಆದ್ರೆ ಸೀಮ್ಸ್ ಫಾರ್ ಡ್ರೀಮ್ಸ್ ನನ್ನನ್ನು ತುದಿಗಾಲಲ್ಲಿ ನಿಲ್ಲಿಸುತ್ತೆ. ನಟನೆಗಿಂತ್ಲೂ ಹೆಚ್ಚು ಬೇಡಿಕೆ ಇರುವ ಕೆಲಸ ಇದು''
- ಎವೆಲಿನ್ ಶರ್ಮಾ, ನಟಿ

ಈಗಾಗ್ಲೇ 10 ಬಾಲಿವುಡ್ ಸಿನಿಮಾಗಳಲ್ಲಿ ಎವೆಲಿನ್ ನಟಿಸಿದ್ದಾರೆ. ಭಾರತಕ್ಕೆ ಬಂದು ನೆಲೆಸುವ ಅವರ ನಿರ್ಧಾರ ನಿಜಕ್ಕೂ ಈಗ ಸಾರ್ಥಕವಾಗಿದೆ. ಒಂದ್ಕಡೆ ವೃತ್ತಿ ಬದುಕು ಹಳಿಯೇರಿದೆ, ಇನ್ನೊಂದ್ಕಡೆ ಸಮಾಜ ಸುಧಾರಣೆಯ ಕಾರ್ಯದಲ್ಲೂ ಅವರು ಬ್ಯುಸಿಯಾಗಿದ್ದಾರೆ. ``ನಟನೆಯಲ್ಲಿ ನಾನು ಹಣ ಗಳಿಸುತ್ತೇನೆ, ಚಾರಿಟಿಗಾಗಿ ಅದನ್ನೆಲ್ಲ ವ್ಯಯಿಸುತ್ತೇನೆ'' ಎನ್ನುವ ಎವೆಲಿನ್ ಅವರಿಂದ ಬಾಲಿವುಡ್ನ ಇತರ ತಾರೆಗಳು ಪಾಠ ಕಲಿಯಬೇಕಿದೆ. 

ಇದನ್ನೂ ಓದಿ...

ಟೊಮ್ಯಾಟೋ ಬೆಳೆಯಲ್ಲಿ ಹೊಸ ಮ್ಯಾಜಿಕ್​- ಜಪಾನ್​ ತಳಿಯಿಂದ ಲಾಭದ ಕಿಕ್​

ರಿಯೋದಲ್ಲಿ"ರೈಲ್ವೇಸ್​"ಕ್ರೀಡಾಪಟುಗಳದ್ದೇ ಕಾರುಬಾರು..!

ಹೆಸರಲ್ಲೇನಿದೆ ಅಂತಹ ಗುಟ್ಟು..? ವೆಸ್ಟ್​ಬೆಂಗಾಲ್ ಈಗ ಜಸ್ಟ್ “ಬಂಗಾಳ” ಮಾತ್ರ..!