ಒಣಕಸ-ಹಸಿಕಸ ಬೇರ್ಪಡಿಸಿ ಕೊಡದಿದ್ರೆ ಹುಷಾರ್..!ಹೊಸ ಗಾರ್ಬೇಜ್ ನೀತಿ ಜಾರಿಗೆ ತರಲಿದೆ ಬಿಬಿಎಂಪಿ:

ಟೀಮ್​ ವೈ.ಎಸ್​. ಕನ್ನಡ

0

ಗಾರ್ಬೇಜ್ ಕ್ರೈಸಿಸ್-ಪ್ರಾಯಶಃ ರಾಜ್ಯ ರಾಜಧಾನಿ ಬೆಂಗಳೂರನ್ನು ಈ ಸಮಸ್ಯೆ ಕಾಡಿದಷ್ಟು ಮತ್ಯಾವ ಸಮಸ್ಯೆಯೂ ಕಾಡಿರಲಿಕ್ಕಿಲ್ಲ. ಯಾರೇ ಬಿಬಿಎಂಪಿಯ ಚುಕ್ಕಾಣಿ ಹಿಡಿಯಲಿ, ಯಾರೇ ಮೇಯರ್ ಗೌನು ತೊಟ್ಟುಕೊಳ್ಳಲಿ ಗಾರ್ಬೆಜ್ ಸಮಸ್ಯೆಯ ತಲೆ ನೋವು ಕಾಡದೇ ಇರಲಾರದು. ಬೆಂಗಳೂರೆಂಬ ಬೃಹತ್ ಗಾತ್ರದ ದೈತ್ಯನಲ್ಲಿ ನಿತ್ಯ ಸಂಗ್ರಹವಾಗುವ ಕಸ ಸುಮಾರು 4 ಸಾವಿರ ಟನ್​ಗೂ ಅಧಿಕ. ಹೀಗಾಗಿ ಬಿಬಿಎಂಪಿ ಕೂಡ ಆಗಾಗ ಹೊಸ ಹೊಸ ಗಾರ್ಬೇಜ್ ಕಂಟ್ರೋಲಿಂಗ್ ಪಾಲಿಸಿಗಳನ್ನು ಜಾರಿಗೆ ತರುತ್ತಲೇ ಇದೆ. ಈಗ ಅಂತಹದ್ದೇ ಇನ್ನೊಂದು ಹೊಸ ನಿಯಮವೊಂದನ್ನು ಬಿಬಿಎಂಪಿ ಜಾರಿಗೆ ತಂದಿದೆ.

ಅಂದಹಾಗೆ ಇನ್ಮುಂದೆ ಎಷ್ಟೇ ಕಷ್ಟವಿದ್ರೂ ಪ್ರತಿ ಮನೆಗಳಲ್ಲೂ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿಕೊಡಲೇ ಬೇಕು. ಒಂದು ವೇಳೆ ಬೆಂಗಳೂರಿನ ನಾಗರೀಕರು ಹಾಗೆ ಮಾಡದೇ ಇದ್ರೆ ಅವರವರ ಮನೆ ಮುಂದೆ ಇರುವ ಕಸ ವಿಲೇವಾರಿಯಾಗಲ್ಲ. ಅಷ್ಟೆ ಅಲ್ಲ ಈ ಮಿಶ್ರ ಕಸವನ್ನು ಪೌರಕಾರ್ಮಿಕರಿಗೆ ಎತ್ತುವಂತೆ ಹೇಳಿದ್ರೆ ಫೈನ್ ಕಟ್ಟುವುದು ಅನಿವಾರ್ಯವಾಗುತ್ತೆ.

ಇದನ್ನು ಓದಿ: ಚೆಕ್​ಇನ್ ಕೌಂಟರ್​ಗಳಲ್ಲಿ ಕಾಯಬೇಕಿಲ್ಲ : ಜಸ್ಟ್ ಫಿಂಗರ್ ಪ್ರಿಂಟ್ ಕೊಟ್ಟು ವಿಮಾನ ಏರುವ ಅವಕಾಶ..

ಹೌದು! ಬೆಂಗಳೂರಿಗೆ ಬಡಿದಿರುವ ದೊಡ್ಡ ಶಾಪ ದಿನಂಪ್ರತಿ ಟನ್​ಗಟ್ಟಲೆ ಉತ್ಪತ್ತಿಯಾಗುವ ಕಸ. ಕಸದ ವಿಲೇವಾರಿ, ನಿರ್ವಹಣೆ ಹಾಗೂ ರೀ-ಸೈಕಲಿಂಗ್ ಬಿಬಿಎಂಪಿಗೆ ಯಾವತ್ತಿಗೂ ತಲೆನೋವು. ನಿತ್ಯ ಶೇಖರಣೆಯಾಗುವ ಮಿಶ್ರ ಕಸದ ನಿರ್ವಹಣೆ ಅಸಾಧ್ಯ ಅನ್ನುವ ಹಂತ ತಲುಪಿದೆ. ಇದೇ ಕಾರಣದಿಂದ ಮಿಶ್ರ ಕಸದ ನಿರ್ವಹಣೆಗೆ ನಗರದ ನಾನಾ ಭಾಗಗಳ ಕೆಲವೆಡೆ ತ್ಯಾಜ್ಯಸಂಸ್ಕರಣಾ ಘಟಕ ಕೂಡಾ ತೆರೆಯಲಾಗಿದೆ. ಆದ್ರೆ ದುರ್ನಾತ ಹಾಗೂ ಅನಾರೋಗ್ಯದ ಕಾರಣದಿಂದ ಈ ಘಟಕಗಳನ್ನು ಸ್ಥಳಾಂತರಿಸಬೇಕು ಅಂತಹ ಘಟಕದ ಸುತ್ತಮುತ್ತಲಿನ ನಿವಾಸಿಗಳು ಆಗಾಗ ಬಿಬಿಎಂಪಿ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದಾರೆ.

ಈ ಎಲ್ಲಾ ರಗಳೆಗಳಿಂದ ಮುಕ್ತಿ ಪಡೆಯಲು ಬಿಬಿಎಂಪಿ ಹೊಸ ತೀರ್ಮಾನ ಮಾಡಿದೆ. ಪಾಲಿಕೆಯ ಹೊಸ ಯೋಜನೆಯ ಪ್ರಕಾರ ಜನ ತಮ್ಮ ಮನೆಯ ತ್ಯಾಜ್ಯವನ್ನು ಮೂಲದಲ್ಲೆ ಹಸಿ ಕಸ ಹಾಗೂ ಒಣ ಕಸವೆಂದು ಬೇರ್ಪಡಿಸಿ ಕೊಡುವುದು ಕಡ್ಡಾಯ. ಹಲವಾರು ವರ್ಷಗಳಿಂದ ಕೇವಲ ಚಿಂತನೆಯ ಹಂತದಲ್ಲಿದ್ದ ಈ ಯೋಜನೆ ಇನ್ನೇನು ಅನುಷ್ಟಾನವಾಗುವುದೊಂದೇ ಬಾಕಿ. ಬಿಬಿಎಂಪಿ ಮೇಯರ್ ಪದ್ಮಾವತಿ ಸಹ ಈ ಬಗ್ಗೆ ಗಂಭೀರವಾಗಿ ನಿರ್ಧಾರ ತಾಳಿ ಯೋಜನೆ ಜಾರಿಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಒಂದು ವೇಳೆ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸದೆ ಇದ್ರೆ ಬಿಬಿಎಂಪಿಯ ಯಾವುದೇ ಪೌರಕಾರ್ಮಿಕರು ಆ ಮನೆಗಳ ಕಸವನ್ನು ಎತ್ತದಂತೆ ಖಡಕ್ ನಿರ್ದೇಶನ ನೀಡಲಾಗಿದೆ. ನಗರದ ನಾಗರೀಕರು ಈ ಹೊಸ ನೀತಿಯನ್ನು ಪಾಲಿಸದೇ ಇದ್ದರೆ ಮೊದಲ ಬಾರಿಗೆ ನೂರು ರೂಪಾಯಿ ದಂಡ ವಿಧಿಸಲಾಗುತ್ತೆ. ಎರಡನೆ ಬಾರಿ ಇದೇ ತಪ್ಪು ಎಸಗಿದ್ರೆ ಇನ್ನೂರು ರೂಪಾಯಿ ಬಳಿಕ ದಂಡದ ಮೊತ್ತ ಹಂತಹಂತವಾಗಿ ಹೆಚ್ಚಾಗುತ್ತದೆ. ಈ ಹೊಸ ದಂಡನೀತಿ ಇದೇ ಫೆಬ್ರವರಿ ಒಂದರಿಂದ ಜಾರಿಗೆ ಬರಲಿದೆ. ಈ ಹಿಂದೆ ಈ ಬಗ್ಗೆ ಬಿಬಿಎಂಪಿಗೆ ಹೈಕೋರ್ಟ್ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಎಚ್ಚರಿಕೆ ನೀಡಿತ್ತು. ಆ ಬಳಿಕ ಬೆಂಗಳೂರಿನ ಜನತೆ ಕೂಡ ಸ್ವಲ್ಪದಿನಗಳ ಮಟ್ಟಿಗೆ ಬಿಬಿಎಂಪಿ ಆದೇಶವನ್ನು ಪಾಲಿಸಿದ್ರು. ನಂತರ ಮತ್ತೆ ಹಳೆಯ ಚಾಳಿಯಂತೆ ಮಿಶ್ರ ಕಸವನ್ನೆ ಕೊಡಲಾರಂಭಿಸಿದ್ರು. ಪೌರಕಾರ್ಮಿಕರು ಕಸವನ್ನುಸ್ವೀಕರಿಸದಿದ್ದ ವೇಳೆ ಎಲ್ಲೆಂದರಲ್ಲಿ ಎಸೆಯಲು ಶುರುಮಾಡಿದ್ರು. ಹೀಗಾಗಿ ಈ ಬಾರಿ ಬಿಬಿಎಂಪಿ ಕಟ್ಟುನಿಟ್ಟಾಗಿ ಮಿಶ್ರ ಕಸವನ್ನು ಬೇರ್ಪಡಿಸಿ ಕೊಡಲೇಬೇಕೆಂದುಆದೇಶ ಹೊರಡಿಸಿದೆ.

ಇದನ್ನು ಓದಿ:

1. ಶಿಕ್ಷಣದ ಬಗ್ಗೆ ತಿಳಿಸಿಕೊಡಲು ಆಯ್ಕೆಯಾದ 16ರ ಪೋರಿ- ಮಿಶೆಲ್ ಒಬಾಮ ಗಮನ ಸೆಳೆದ ಭಾರತೀಯ ಮೂಲದ ಹುಡಗಿ

2. ಚಪಾತಿ ಮಾರ ಹೊರಟವಳು ಕ್ಲೌಡ್​ ಟೆಕ್​ ಕಂಪನಿ ಹುಟ್ಟುಹಾಕಿದಳು..!

3. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ..!