ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

ಟೀಮ್​ ವೈ. ಎಸ್​. ಕನ್ನಡ

ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

Sunday May 21, 2017,

4 min Read

ಜಗತ್ತು ಹಾಗೇಯೆ. ಇಲ್ಲಿ ಬಡವರು, ಶ್ರೀಮಂತರು, ಮಧ್ಯಮ ವರ್ಗದರು ಇರುತ್ತಾರೆ. ವಯಸ್ಸಾದವರು, ಯುವಕರು ಮತ್ತು ಮಕ್ಕಳು ಈ ಸೃಷ್ಟಿಯ ಭಾಗವೂ ಹೌದು. ಆದ್ರೆ ಆರೋಗ್ಯದ ವಿಚಾರಕ್ಕೆ ಬಂದರೆ ಎಲ್ಲರೂ ಒಂದೇ. ಕಾಯಿಲೆ ಅನ್ನುವುದು ಎಲ್ಲರಿಗೂ ಬಂದೇ ಬರುತ್ತದೆ. ಶ್ರೀಮಂತರು ಹೈ-ಫೈ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆಗಳನ್ನು ಪಡೆದ್ರೆ, ಮಧ್ಯಮ ವರ್ಗದವರು ಹಾಗೂ- ಹೀಗೂ ಮಾಡಿ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದ್ರೆ ಬಡವರು ಆರೋಗ್ಯದ ಸಮಸ್ಯೆ ಬಂದರೆ ಕಷ್ಟಪಡುವುದೇ ಹೆಚ್ಚು. ಕೆಲವೊಮ್ಮೆ ಔಷಧಗಳ ವೆಚ್ಚ ನೋಡಿ ಅದರಿಂದ ದೂರ ಉಳಿಯುತ್ತಾರೆ. ಇನ್ನು ಕೆಲವೊಮ್ಮೆ, ಮುಂದೆ ನೋಡೋಣ ಅಂತ ಸುಮ್ಮನಾಗುತ್ತಾರೆ. ಆದ್ರೆ ಬಡವರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಂಸ್ಥೆಯೊಂದಿದೆ. ಅದರ ಹೆಸರು "ಮಾತೃಸಿರಿ ಫೌಂಡೇಷನ್".

image


ಏನಿದು ಮಾತೃಸಿರಿ ಫೌಂಡೇಷನ್..?

"ಮಾತೃಸಿರಿ ಫೌಂಡೇಷನ್" ಬಡವರ ಆರೋಗ್ಯ ಚಿಕಿತ್ಸೆಗಾಗಿ ಇರುವ ಎನ್​ಜಿಒ. ಶ್ರೀಮಂತರು ಹೇಗೋ ದುಡ್ಡು ಖರ್ಚು ಮಾಡಿ ತಮಗಿರುವ ಆರೋಗ್ಯ ಸಮಸ್ಯೆಗೆ ಪರಿಹಾರಿ ಕಂಡುಕೊಳ್ಳುತ್ತಾರೆ. ಆದ್ರೆ ಬಡವರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಯಾರೂ ಇಲ್ಲ. ಆದ್ರೆ "ಮಾತೃಸಿರಿ ಫೌಂಡೇಷನ್" ಆ ಕೆಲಸವನ್ನು ಮಾಡುತ್ತಿದೆ. ಔಷಧಿಗಳನ್ನು ಹಾಗೂ ಆರೋಗ್ಯದ ಚೆಕಪ್ ಮಾಡಿಸಿಕೊಳ್ಳಲು ಅಶಕ್ತರಾಗಿರುವವರ ನೆರವಿಗೆ ಈ ಸಂಸ್ಥೆ ಇದೆ. ಬೆಂಗಳೂರಿನ ಸರ್ಜಾಪುರದಲ್ಲಿರುವ ಈ ಸಂಸ್ಥೆ ಬಡವರ ಪಾಲಿನ ಆರೋಗ್ಯ ಸಂಜೀವಿನಿ. ಸುಮಾರು 10 ವರ್ಷಗಳಿಂದ "ಮಾತೃಸಿರಿ ಫೌಂಡೇಷನ್ "ಕೆಲಸ ಮಾಡುತ್ತಿದೆ. ಕೂಲಿ ಕಾರ್ಮಿಕರು, ಬಡವರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದಿರುವವರ ನೆರವಿಗೆ "ಮಾತೃಸಿರಿ ಫೌಂಡೇಷನ್" ನಿಂತಿದೆ. ಬಿಜಾಪುರ ಮೂಲದ ವೈದ್ಯ, ಡಾಕ್ಟರ್ ಸುನೀಲ್ ಕುಮಾರ್ ಹೆಬ್ಬಿ "ಮಾತೃಸಿರಿ ಫೌಂಡೇಷನ್" ಸಂಸ್ಥಾಪಕರು.

image


ಕಾರಣ ಏನು..?

ಉತ್ತರ ಕರ್ನಾಟ ಮೂಲದ ಹೆಬ್ಬಿ ಬಿಜಾಪುರದ ಚಿಕ್ಕ ಹಳ್ಳಿಯಿಂದ ಬಂದವರು. ಆ ಹಳ್ಳಿಯಲ್ಲಿ ಕಾಯಿಲೆ ಬಂದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳು ಕೂಡ ಇರಲಿಲ್ಲ. ಅಷ್ಟೇ ಅಲ್ಲ ವೈದ್ಯರು ಕೂಡ ಇರಲಿಲ್ಲ. ಈ ನಡುವೆ ಸುನೀಲ್ ಕುಮಾರ್ ಹೆಬ್ಬಿ, ಮನೆಯವರ ಆಶಯದಂತೆ ಡಾಕ್ಟರ್ ಆದ್ರು. ಬೆಂಗಳೂರಿನ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಕೈ ತುಂಬಾ ಸಂಬಳ ಬರುವ ಕೆಲಸ ಕೂಡ ಸಿಕ್ಕಿತ್ತು. ಆದ್ರೆ ಅದರಲ್ಲಿ ನೆಮ್ಮದಿ ಇರಲಿಲ್ಲ. ಬಡವರ ಸೇವೆ ಮಾಡಬೇಕು ಅನ್ನುವ ಆಸೆ ಹೆಚ್ಚುತ್ತಾ ಹೋಯಿತು. ಈ ಹಂತದಲ್ಲಿ ಒಂದು ಬಾರಿ ಕಾರಿನಲ್ಲಿ ಮನೆಗೆ ತೆರುಳುತ್ತಿದ್ದಾಗ ಅಪಘಾತದ ದೃಶ್ಯವನ್ನು ನೋಡಿದ್ರು. ಫಸ್ಟ್ ಏಡ್ ಕಿಟ್ ಕೈಯಲ್ಲಿತ್ತು. ಅಪಘಾತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿದ್ರು. ಇದು ಸುನೀಲ್ ಕುಮಾರ್ ಹೆಬ್ಬಿಯ ಮನಸ್ಸನ್ನೇ ಬದಲಿಸಿತು. ಮೊಬೈಲ್ ಡಾಕ್ಟರ್ ಅನ್ನುವ ಸೇವೆಯನ್ನು ಆರಂಭಿಸಿದ್ರು.

image


“ ಕೇವಲ ದುಡ್ಡು ಮಾಡಬೇಕು ಅನ್ನುವ ಉದ್ದೇಶ ಇದ್ದರೆ ಸಾಕಷ್ಟು ಬೇರೆ ದಾರಿಗಳಿವೆ. ಆದ್ರೆ ವೈದ್ಯನಾಗಿ ನನಗೆ ಸಮಾಜ ಸೇವೆ ಮಾಡಬೇಕು ಅನ್ನುವುದೇ ಮುಖ್ಯವಾಗಿತ್ತು. ಅದಕ್ಕೆ ಸಂಬಳ ಬರುತ್ತಿದ್ದ ಕೆಲಸವನ್ನು ಕೈ ಬಿಟ್ಟೆ. ನನ್ನ ಕೈಯಿಂದ ಖರ್ಚಾದರೂ ಪರ್ವಾಗಿಲ್ಲ, ಸಮಾಜಕ್ಕೆ ನನ್ನಿಂದಾದ ಕೊಡುಗೆ ನೀಡಬೇಕು ಅನ್ನುವ ನಿರ್ಧಾರ ಮಾಡಿದೆ.”
- ಡಾ. ಸುನೀಲ್ ಕುಮಾರ್ ಹೆಬ್ಬಿ, ಮಾತೃಸಿರಿ ಫೌಂಡೇಷನ್ ಸಂಸ್ಥಾಪಕ

ಏನಿದು ಮೊಬೈಲ್ ಡಾಕ್ಟರ್..?

ಹೆಬ್ಬಿ ಮೊಬೈಲ್ ಡಾಕ್ಟರ್ ಅನ್ನುವ ಹೊಸ ಕಾನ್ಸೆಪ್ಟ್ ಅನ್ನು ಮೊದಲಿಗೆ ಹುಟ್ಟು ಹಾಕಿದ್ರು. ಸುನೀಲ್ ಬಳಿಯಿದ್ದ ಒಂದು ಕಾರ್ ಅನ್ನು ಸುಸಜ್ಜಿತ ಕ್ಲಿನಿಕ್ ತರಹ ಮಾಡಿಕೊಂಡ್ರು. ಕಾರ್​ನಲ್ಲೇ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ್ರು. ಕಾರ್​ನಲ್ಲೇ ಡಾಕ್ಟರ್ ಕಿಟ್ ಕೂಡ ಲಭ್ಯವಿದೆ. ಈ ಮೂಲಕ ಎಲ್ಲಿ ಬೇಕೋ ಅಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿದೆ. ಕಳೆದ 8 ವರ್ಷಗಳಿಂದ ಮೊಬೈಲ್ ಡಾಕ್ಟರ್ ಕಾರ್ಯನಿರ್ವಹಿಸುತ್ತಿದೆ.

ಇದನ್ನು ಓದಿ: ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..! 

700 ಕ್ಯಾಂಪ್, 33000 ಜನರಿಗೆ ಉಪಯೋಗ

ಕಳೆದ 10 ವರ್ಷಗಳಲ್ಲಿ ಸುನೀಲ್ ಕುಮಾರ್ ಹೆಬ್ಬಿ ಮತ್ತು ತಂಡ ಒಟ್ಟು 700ಕ್ಕೂ ಅಧಿಕ ಮೆಡಿಕಲ್ ಕ್ಯಾಂಪ್​ಗಳನ್ನುಮಾಡಿದೆ. ಈ ಕ್ಯಾಂಪ್​ಗಳಲ್ಲಿ ಒಟ್ಟು 33000ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಿದೆ. ಈ ರೀತಿಯ ಕ್ಯಾಂಪ್​ಗಳಿಗೆ ಕೂಲಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಆರ್ಥಿಕವಾಗಿ ನಿಶ್ಯಕ್ತಿ ಹೊಂದಿದವರು ಹೆಚ್ಚಾಗಿ ಬರುತ್ತಾರೆ. ಅವರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿ "ಮಾತೃಸಿರಿ ಫೌಂಡೇಷನ್" ಸಮಾಜ ನೇವೆಯನ್ನು ಮಾಡುತ್ತಿದೆ. "ಮಾತೃಸಿರಿ ಫೌಂಡೇಷನ್" ಈ ಸೇವೆಯಲ್ಲಿ ಒಟ್ಟು 1800 ವೈದ್ಯಕೀಯ ಸ್ವಯಂ ಸೇವಕರು ಮತ್ತು 350ಕ್ಕೂ ಅಧಿಕ ಪರಿಣಿತ ಡಾಕ್ಟರ್​ಗಳು ಕೆಲಸ ಮಾಡುತ್ತಿದ್ದಾರೆ.

“ಆರಂಭದಲ್ಲಿ ನನ್ನ ಜೊತೆ ಸಾಕಷ್ಟು ಕೆಲಸ ಮಾಡಲು ಸಾಕಷ್ಟು ವೈದ್ಯರು ಹಿಂದೇಟು ಹಾಕಿದ್ದರು. ಕೆಲವರು ನನ್ನ ಜೊತೆ ಸೇರಿ ಕೆಲವು ದಿನ ಕೆಲಸ ಮಾಡಿ ವಾಪಾಸ್ ಹೊರಟು ಹೋದ್ರು. ಇನ್ನು ಕೆಲವರಿಗೆ ಸಮಯವನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ನನಗೆ ಗುರಿ ಇತ್ತು, ಬಡವರ ಸೇವೆ ಮಾಡಬೇಕು ಅನ್ನುವ ಹಂಬಲ ಇತ್ತು. ಹೀಗಾಗಿ ನಾನು ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಕೈಯಿಂದಾಗುವ ಕೆಲಸವನ್ನು ಮಾಡುತ್ತಾ ಇದ್ದೇನೆ. ಇವತ್ತು ಮಾತೃಸಿರಿ ಫೌಂಡೇಷನ್ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ”
- ಡಾ. ಸುನೀಲ್ ಕುಮಾರ್ ಹೆಬ್ಬಿ, ಮಾತೃಸಿರಿ ಫೌಂಡೇಷನ್ ಸಂಸ್ಥಾಪಕ

ಸಮಾಜ ಸೇವೆಗೆ ಆರ್ಥಿಕ ಸಮಸ್ಯೆ

ಆರ್ಥಿಕವಾಗಿ ಅಶಕ್ತರಾದವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಬಹುದು. ಆದ್ರೆ ಔಷಧಗಳ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ಕಾಣದ ಕೈಗಳು ಸಮಾಜ ಸೇವೆಗೆ ಕೈ ಜೋಡಿಸುತ್ತಾ ಇದ್ರೂ, ಅದು ಸಾಕಾಗುತ್ತಿಲ್ಲ. ಅಷ್ಟೇ ಅಲ್ಲ ಎಲ್ಲರಿಗೂ ಔಷಧಿಯ ವ್ಯವಸ್ಥೆ ಮಾಡಲು ಸಿಕ್ಕಾಪಟ್ಟೆ ಕಷ್ಟವಾಗುತ್ತಿದೆ. ಇಷ್ಟಾದ್ರೂ, "ಮಾತೃಸಿರಿ ಫೌಂಡೇಷನ್" ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ ತನ್ನ ಸಮಾಜಮುಖಿ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಮಾಡಬೇಕು ಅನ್ನುವ ಲೆಕ್ಕಾಚಾರದಲ್ಲಿದೆ.

image


ಶಾಲೆ, ಕಾಲೇಜುಗಳಲ್ಲಿ ವಿಶೇಷ ಕ್ಯಾಂಪ್

ಸಾಮಾನ್ಯವಾಗಿ ಕಟ್ಟದ ಕೆಲಸಗಾರರು ಹಾಗೂ ಕಾಲಿ ಕಾರ್ಮಿಕರರು ಇರುವ ಸ್ಥಳಗಳಲ್ಲಿ ಹೆಬ್ಬಿ ಮತ್ತು ತಂಡ ಹೆಚ್ಚು ಕ್ಯಾಂಪ್​ಗಳನ್ನು ನಡೆಸುತ್ತಿದೆ. ಆದ್ರೆ ಶಾಲಾ, ಕಾಲೇಜುಗಳಲ್ಲೂ ಕ್ಯಾಂಪ್​ಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಪರೀಕ್ಷೆ ನಡೆಸಿ ಅವರಿಗೆ ಆರೋಗ್ಯದ ಸಲಹೆಗಳನ್ನು ನೀಡುತ್ತಿದೆ. ಈ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಆರೋಗ್ಯದ ಬಗ್ಗೆ ಹೆಚ್ಚು ಜ್ಞಾನ ಹೊಂದುವಂತೆ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

100 ರೂಪಾಯಿಗೆ ಎಲ್ಲಾ ಚಿಕಿತ್ಸೆ..!

ಇವತ್ತಿನ ಕಾಲದಲ್ಲಿ ಕ್ಲಿನಿಕ್​ಗಳಿಗೆ ಹೋದರೆ ಡಾಕ್ಟರ್ ಕನ್ಸಲ್ಟೇಷನ್ ಫೀಸ್ 100 ರೂಪಾಯಿಗಿಂತ ಹೆಚ್ಚೇ ಇರುತ್ತದೆ. ಕೊಂಚ ಹೈ-ಫೈ ಕ್ಲಿನಿಕ್​ಗಳಾದ್ರೆ ಕಥೆ ಮುಗಿದೇ ಹೋಗುತ್ತದೆ. ಆದ್ರೆ ಡಾಕ್ಟರ್ ಸುನೀಲ್ ಕುಮಾರ್ ಹೆಬ್ಬಿ "ಹ್ಯೂಮನ್ ಚಾರಿಟೇಬಲ್ ಟ್ರಸ್ಟ್" ಮೂಲಕ ಕೇವಲ 100 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿ ಪ್ರತಿನಿತ್ಯ 70 ರಿಂದ 80 ರೋಗಿಗಳು ಬಂದು ಆರೊಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ. ರೋಗಿಗಳು ನೀಡುವ 100 ರೂಪಾಯಿಗಳ ಪೈಕಿ 30 ರೂಪಾಯಿ ವೈದ್ಯರ ಕನ್ಸಲ್ಟೇಷನ್ ಶುಲ್ಕವಾಗಿದ್ದರೆ, 40 ರೂಪಾಯಿಗೆ ಔಷಧಿಗಳು ಸಿಗುತ್ತವೆ. ಇನ್ನು ಬ್ಲಡ್, ಯೂರಿನ್ ಮತ್ತು ಇತರೆ ಚಕಪ್​ಗಳಿಗೆ ರೂಪಾಯಿ ಚಾರ್ಜ್ ಮಾಡಲಾಗುತ್ತದೆ.

"ಮಾತೃಸಿರಿ ಫೌಂಡೇಷನ್​", ಮೊಬೈಲ್ ಡಾಕ್ಟರ್ ಮತ್ತು ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ಯಾರೂ ಊಹಿಸಲು ಅಸಾಧ್ಯವಾಗಿರುವಂತಹ ಕೆಲಸಗಳನ್ನು ಮಾಡುತ್ತಿದೆ. ಇವತ್ತಿನ ಕಾಲದಲ್ಲಿ ದುಡ್ಡಿಗಿಂತ ಮಾನವೀಯತೆಗೆ ಬೆಲೆ ಇದೆ ಅನ್ನುವುದನ್ನು ಸುನೀಲ್ ಕುಮಾರ್ ಹೆಬ್ಬಿ ತನ್ನ ಕಾರ್ಯಗಳಿಂದ ಮಾಡಿ ತೋರಿಸುತ್ತಿದ್ದಾರೆ.

ಇದನ್ನು ಓದಿ:

1. ನಿಮ್ಮ ಬ್ಯೂಟಿಫುಲ್ ಲುಕ್​ಗಾಗಿ ಡೆಸ್ರಿಂಗ್ ಸೆನ್ಸ್ ಹೀಗಿದ್ದರೆ ಚೆನ್ನ.. !

2. "ಸ್ವಚ್ಛಗೃಹ"ದಲ್ಲಿದೆ ಕಸದಿಂದ ರಸ ಮಾಡಿಕೊಳ್ಳುವ ಪಾಠ..!

3. 1 ರೂಪಾಯಿಗೆ ವೈದ್ಯಕೀಯ ಸೇವೆ- ಮುಂಬೈನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದೆ ಭಾರತೀಯ ರೈಲ್ವೇ..!