"ಗನ್​"ನ ಜೊತೆ "ಪೆನ್​" ಕಡೆಗೂ ಒಲವು..!

ಟೀಮ್​ ವೈ.ಎಸ್​. ಕನ್ನಡ

1

ರವೀಶ್ ರೇವಣ್ಣ, ಒಬ್ಬ ಖಡಕ್ ಪೊಲೀಸ್ ಅಧಿಕಾರಿಯಾಗಿ, ಕಳ್ಳ-ಕಾಕರನ್ನು ಸದೆಬಡಿಯೋ ಕಾರ್ಯದಲ್ಲಿ ಸದಾ ಎಚ್ಚರವಹಿಸೋ ವ್ಯಕ್ತಿ, ತನ್ನದಲ್ಲದ ಮತ್ತೊಂದು ಕ್ಷೇತ್ರದಲ್ಲಿ ಬೆಳೆಯೋಕೆ ಸಾಧ್ಯನಾ? ಈ ಪ್ರಶ್ನೆಗೆ ಬಹುಪಾಲು ಜನರು ಇಲ್ಲ ಅಂತಲೇ ಉತ್ತರಿಸೋದು. ಆದ್ರೆ, ಅಂಥವರ ನಂಬಿಕೆಯನ್ನು ಹುಸಿಗೊಳಿಸಿದ ಪೊಲೀಸ್ ಅಧಿಕಾರಿ ಒಬ್ಬರು ಮನಸ್ಸಿದ್ದರೆ ಮಾರ್ಗ ಅಂಥ ಸಾಧಿಸಿ ತೋರಿಸಿದ್ದಾರೆ, ಇತರರಿಗೂ ಮಾದರಿಯಾಗಿದ್ದಾರೆ.

ಪೊಲೀಸ್‍ರಿಗೆ ಯಾವಾಗಲೂ ಟೆನ್ಶನ್ ಇದ್ದೇ ಇರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕು, ಕ್ರಿಮಿನಲ್‍ಗಳನ್ನು ಹಿಡಿಯಬೇಕು, ಯಾರಾದರೂ ವಿಐಪಿ ಬಂದರೆ ಅವರಿಗೆ ರಕ್ಷಣೆ ಕೊಡಬೇಕು. ಹೀಗೆ ಇಷ್ಟೆಲ್ಲ ಕೆಲಸಗಳ ನಡುವೆ ಅವರಿಗೆ ಕೆಲವೊಮ್ಮೆ ತಮ್ಮ ವೈಯಕ್ತಿಕ ಜೀವನದ ಮೇಲೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸಾಹಿತ್ಯ - ಸಂಗೀತದಂತಹ ಸದಭಿರುಚಿ ಹವ್ಯಾಸ ರೂಢಿಸಿಕೊಳ್ಳುವುದು ಕಷ್ಟ ಸಾಧ್ಯ. ಆದರೆ ಎಸಿಪಿ ರವೀಶ್ ರೇವಣ್ಣ ಹಾಗಲ್ಲ. ಗನ್ ಹಿಡಿದು ಕಳ್ಳ – ಕಾಕರು, ಕ್ರಿಮಿನಲ್‍ಗಳನ್ನು ಹಿಡಿಯುತ್ತಾರೆ, ಲೇಖನಿ ಹಿಡಿದು ಬರಹಗಳನ್ನು ಬರೆಯುತ್ತಾರೆ, ಇನ್ನು ಮೈಕ್ ಹಿಡಿದರಂತೂ ಎಲ್ಲರೂ ಮಂತ್ರಮುಗ್ಧರಾಗಿ ತಲೆಯಾಡಿಸುವಂತೆ ಹಾಡುತ್ತಾರೆ.

ಹೌದು, ಗೂಂಡಾಗಳ ಹುಟ್ಟಡಗಿಸೋ ಈ ಪೊಲೀಸಪ್ಪನಿಗೆ ಸಾಹಿತ್ಯ-ಸಂಗೀತ ಅಂದ್ರೆ ಎಲ್ಲಿಲ್ಲದ ಒಲವು. ರವೀಶ್ ರೇವಣ್ಣ ಇವ್ರ ಹೆಸ್ರು. ಗೂಂಡಾಗಳಿಗೆ ಇವರು ದುಸ್ವಪ್ನ, ಅದೇ ಇವ್ರ ಹಾಡು, ಸಾಹಿತ್ಯ ಅಂದ್ರೆ ಸಂಗೀತ - ಸಾಹಿತ್ಯಪ್ರಿಯರ ಕಿವಿ ನಿಮಿರಿ ನಿಲ್ತಾವೆ. ಖಡಕ್ ಧ್ವನಿಯಿಂದಲೇ ಎಲ್ಲರನ್ನು ಬೆದರಿಸೋ ಈ ಪೊಲೀಸ್ ಅಧಿಕಾರಿಗೆ ಸುಮಧುರ ಕಂಠ ದೇವರು ಕೊಟ್ಟ ವರದಾನ. ಪೊಲೀಸ್ ಇಲಾಖೆಯ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮ ಹಾಡುಗಾರಿಕೆಯಿಂದ ಎಲ್ಲರನ್ನು ಸೆಳೆದು, ಪೊಲೀಸ್ ಇಲಾಖೆಯ ಗಾನಕೋಗಿಲೆಯಾಗಿ ಅನೇಕರಿಗೆ ಚಿರಪರಿಚಿತರು. ಹೀಗಾಗಿಯೇ ಪೊಲೀಸ್ ಇಲಾಖೆಯ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಿದ್ದರೂ ಅಲ್ಲಿ ರವೀಶ್ ರೇವಣ್ಣ ಅವರ ಗಾನಸುಧೆ ಕೇಳಿಬರುತ್ತದೆ.

ಇದನ್ನು ಓದಿ: ಕೆಲಸದ ಬಗ್ಗೆ ಚಿಂತೆ ಬಿಡಿ- ಜಾಬ್​ ಫಾರ್​ ಹರ್​ ಮೂಲಕ ಉದ್ಯೋಗಕ್ಕೆ ಟ್ರೈ ಮಾಡಿ..!

ಸಾಹಿತ್ಯ ಕ್ಷೇತ್ರದಲ್ಲೂ ಇವರ ಒಲವು ಬಹುವಾಗೇ ಇದೆ. ಮೊದಲಿನಿಂದಲೂ ಪುಸ್ತಕ ಓದುವ ಗೀಳು ಅಂಟಿಸಿಕೊಂಡಿದ್ದ ರವೀಶ್ ಅವರಿಗೆ ಬರವಣಿಗೆ ಒಲಿಯುವುದು ಅಷ್ಟೇನು ಕಷ್ಟವಾಗಲಿಲ್ಲ. ಪ್ರಸ್ತುತ ವಿಚಾರಗಳ ಬಗ್ಗೆ ಲೇಖನಗಳನ್ನು ಬರೆಯುವುದರ ಜೊತೆಗೆ, ತಮ್ಮಿಷ್ಟದ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ವಿವರಿಸುತ್ತಾ ಅನೇಕ ಬರಹಗಳನ್ನು ಸಾಮಾಜಿಕ ಜಾಲತಾಣಗಳಿಗೆ ಬಳುವಳಿಯಾಗಿ ನೀಡಿದ್ದಾರೆ. ಫೇಸ್‍ಬುಕ್, ವಾಟ್ಸ್​ಆ್ಯಪ್‍ಗಳಲ್ಲಿ ಇವ್ರ ಬರಹಗಳು ಹೆಚ್ಚಾಗಿ ಚಾಲ್ತಿಯಲ್ಲಿವೆ. ಕೆಲ ವರ್ಷಗಳಲ್ಲಿ ತಮ್ಮ ಬರಹಗಳ ಪುಸ್ತಕ ಹೊರತಂದರೂ ಆಶ್ಚರ್ಯವಿಲ್ಲ.

ಯಾವಾಗಲು ಸರಳ ಸಜ್ಜನಿಕೆಗೆ ಉದಾಹರಣೆಯಾಗಿ ಬದುಕುವ ರವೀಶ್‍ರಿಗೆ ಮುದ್ದಿನ ಮಗಳು ಸಿರಿ ಎಂದರೆ ಎಲ್ಲಿಲ್ಲದ ಪ್ರೀತಿ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಬಹುವಾಗಿ ಪೋಸ್ಟ್ ಮಾಡೋ ವಿಷಯಗಳಲ್ಲಿ ಹೆಚ್ಚಿನದ್ದು ಮಗಳ ಬಗ್ಗೆಯೇ ಇದ್ರೂ ಆಶ್ಚರ್ಯ ಪಡಬೇಕಿಲ್ಲ. ಮಗಳೆಂದರೆ ದೇವತೆ ಅನ್ನೋ ರವೀಶ್ ಅಂದ್ರೆ ಮಗಳು ಸಿರಿ ಕೂಡ ಅಷ್ಟೇ ಅಚ್ಚುಮೆಚ್ಚು. ಇಷ್ಟೆಲ್ಲಾ ಟ್ಯಾಲೆಂಟ್ ಇರೋ ರವೀಶ್ ರೇವಣ್ಣ ಕೆಲಸದ ವಿಷಯದಲ್ಲೂ ಅಷ್ಟೇ ನಿಯತ್ತು.

ತುಮಕೂರು ಜಿಲ್ಲೆಯ, ಚಿಕ್ಕನಾಯಕನ ಹಳ್ಳಿಯ, ರೈತಾಪಿ ಕುಟುಂಬದಲ್ಲಿ ಹುಟ್ಟಿದ ರವೀಶ್ ಈಗಲೂ ಹಳ್ಳಿ ಸೊಗಡನ್ನೇ ಇಷ್ಟಪಡ್ತಾರೆ. ತಿಪಟೂರಿನ ಕಾಲೇಜಿನಲ್ಲಿ ಪದವಿ ಮುಗಿಸಿದ್ರು. ನಂತ್ರ 1994ರಲ್ಲಿ ಎಸ್‍ಐ ಪರೀಕ್ಷೆ ಬರೆದು ಆಯ್ಕೆಯಾಗಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸೋಕೆ ಶುರುಮಾಡಿದ್ರು. ಅಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮರೆದಿದ್ದಾರೆ. ರಾಜಧಾನಿ ಬೆಂಗಳೂರಿನ ಕೆಂಗೇರಿ, ಜ್ಞಾನಭಾರತಿ, ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿ, ನಿಷ್ಠಾವಂತ ಪೊಲೀಸ್ ಅಧಿಕಾರಿ ಎನಿಸಿಕೊಂಡಿದ್ದಾರೆ. ನಿಷ್ಠೆಯಿಂದಲೇ ಎಸ್‍ಐ ಪೋಸ್ಟ್​ನಿಂದ ಇನ್ಸ್​ಪೆಕ್ಟರ್ ಆದ ರವೀಶ್, ತಮ್ಮ ಸರಹದ್ದಿನ ಗೂಂಡಾಗಳ ಹುಟ್ಟಡಗಿಸಿದ್ದಾರೆ.

ಸದ್ಯ ಮತ್ತೊಂದು ಪ್ರಮೋಷನ್‍ನೊಂದಿಗೆ ತಮ್ಮ ಪ್ರೀತಿಪಾತ್ರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪವಿಭಾಗದಲ್ಲಿ ಡಿವೈಎಸ್‍ಪಿಯಾಗಿ ಅದೇ ನಿಷ್ಠಾವಂತ ಸೇವೆಯನ್ನು ಮುಂದುವರೆಸಿದ್ದಾರೆ. ಇಲಾಖೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷ ಸೇವೆಸಲ್ಲಿಸಿರೋ ರವೀಶ್ ರೇವಣ್ಣ ಇಲಾಖೆಯಿಂದ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ತಮ್ಮ ಶುದ್ಧ ಕೈನಿಂದಲೇ ಎಸ್‍ಐ ಹುದ್ದೆಯಿಂದ ಡಿವೈಎಸ್‍ಪಿ ಹುದ್ದೆವರೆಗೆ ಬಡ್ತಿ ಪಡೆದಿದ್ದಾರೆ. ಇವ್ರ ಕರ್ತವ್ಯ ನಿಷ್ಠೆಗೆ ದಕ್ಷಿಣ ಕನ್ನಡ ಎಸ್ಪಿ ಭೂಷಣ್ ಬೊರಸೆ ಅವರಿಂದ ಸಾಕಷ್ಟು ಬಾರಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ಪಡೆದಿದ್ದಾರೆ. ಪೊಲೀಸರೆಂದರೆ ನಂಬಿಕೆ ಕಳೆದುಕೊಂಡಿರೋ ಅದೆಷ್ಟೋ ಜನ ಇಂಥವರಿಂದ ಇಲಾಖೆ ಬಗ್ಗೆ ನಂಬಿಕೆ ಉಳಿಸಿಕೊಂಡಿದ್ದಾರೆ. ಕರ್ತವ್ಯಕ್ಕೂ ಕೊಂಕಾಗದಂತೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲೂ ಬೆಳೆಯುತ್ತಿರೋ ಈ ಮಲ್ಟಿ ಟ್ಯಾಲೆಂಟೆಡ್ ಪೊಲೀಸ್ ಅಧಿಕಾರಿಗೆ ನಮ್ಮದೊಂದು ಸಲಾಂ. 

ಇದನ್ನು ಓದಿ:

1. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್

2. ಬೈಕ್ ಏರಿ ಮಹಿಳಾಮಣಿಗಳ ಹಿಮಾಲಯ ಸವಾರಿ!

3. ಡಿಜಿಟಲ್​ ಪ್ರಯೋಗಕ್ಕೆ ಮುಂದಾದ ಪೊಲೀಸ್​ ಡಿಪಾರ್ಟ್​ಮೆಂಟ್​- ಕಾರ್ಡ್​ ಸ್ವೈಪಿಂಗ್​ಗೆ ತಯಾರಿ ಮಾಡಿಕೊಂಡ ಟ್ರಾಫಿಕ್​ ಪೋಲಿಸರು