ಸತ್ತ ಮೇಲೆ ಸಂತನಾದ ಸೈನಿಕ..!

ವಿಶಾಂತ್​

0

ಸಾಮಾನ್ಯವಾಗಿ ಸೈನಿಕರು ಗಡಿ ಕಾಯುತ್ತಾರೆ. ಕೆಲವೆಡೆ ಎರಡು ದೇಶಗಳ ಗಡಿಯಲ್ಲಿ ತಂತಿ ಬೇಲಿ ಅಥವಾ ಅಡ್ಡಗೋಡೆ ನಿರ್ಮಿಸಲಾಗಿರುತ್ತೆ. ಆದರೆ ಸಿಕ್ಕಿಂನ ಭಾರತ - ಚೀನಾ ಗಡಿಯಲ್ಲಿ ಸಂತನೊಬ್ಬ ಗಡಿ ಕಾಯುತ್ತಿದ್ದಾನೆ! ಅರೆ ಅದು ಹೇಗೆ ಸಾಧ್ಯ ಅಂತ ಹುಬ್ಬೇರಿಸಬೇಡಿ. ಹಾಗೇ ಓದುತ್ತಾ ಸಾಗಿ...

ಇವರು `ಬಾಬಾ' ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್ ಎಂದಾಕ್ಷಣ ಭಾರತ ಕ್ರಿಕೆಟಿಗ `ಟರ್ಬನೇಟರ್' ಹರ್ಭಜನ್ ಸಿಂಗ್ ಎಂದುಕೊಳ್ಳಬೇಡಿ. ಯಾಕೆಂದರೆ ನಾವು ಈಗ ಹೇಳಹೊರಟಿರುವ ಹರ್ಭಜನ್ ಸಿಂಗ್ `ಟರ್ಬನೇಟರ್'ಗಿಂತ ಹೆಚ್ಚು ಹೆಸರುವಾಸಿ! ಇವರು ಹುಟ್ಟಿದ್ದು ಆಗಸ್ಟ್ 3, 1941ರಲ್ಲಿ. ಪಂಜಾಬ್‍ನ ಭತ್ತೇ ಭೈನಿ ಅವರ ಹುಟ್ಟೂರು. ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಹರ್ಭಜನ್ ಅವರು ಸೈನ್ಯ ಸೇರಿದರು. 14ನೇ ರಜಪುತ್ ರೆಜಿಮೆಂಟ್‍ನಲ್ಲಿದ್ದ ಅವರು 1965ರ ಭಾರತ - ಪಾಕಿಸ್ತಾನ ನಡುವಣ ಯುದ್ಧದಲ್ಲಿ ಹೋರಾಡಿದ್ದರು. ನಂತರ 1967ರಲ್ಲಿ 18ನೇ ರಜಪುತ್ ರೆಜಿಮೆಂಟ್‍ಗೆ ವರ್ಗಾಣೆಯಾದ ಅವರು ಸಿಕ್ಕಿಂ ರಾಜ್ಯದ ಭಾರತ - ಚೀನಾ ಗಡಿಗೆ ಹೋಗೇಕಾಯ್ತು.

ವಿಧಿವಶರಾದ ಹರ್ಭಜನ್

ಭಾರತ - ಚೀನಾ ಗಡಿಯಲ್ಲಿರುವಾಗ ಹರ್ಭಜನ್ ಸಿಂಗ್ ಸಾವಿಗೀಡಾದರು. ಆ ಕುರಿತು ಹಲವು ಸುದ್ದಿಗಳಿವೆ. ಕೆಲ ಮೂಲಗಳ ಪ್ರಕಾರ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಗುಂಡಿನ ಕಾಳಗದಲ್ಲಿ ಹರ್ಭಜನ್ ಸಿಂಗ್ ಬಲಿಯಾದರು ಎಂದು ಹೇಳಲಾಗಿದೆ. ಆದರೆ ಕುದುರೆಗಳ ಮೇಲೆ ಆಹಾರ ಸಾಮಗ್ರಿಗಳನ್ನು ಹೇರಿ ಹಿಮಚ್ಛಾದಿತ ಬೆಟ್ಟ ಗುಡ್ಡ ಪ್ರದೇಶಗಳ ನಡುವೆ ತಮ್ಮ ಔಟ್‍ಫೋಸ್ಟ್​​ಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಸಾವಿಗೀಡಾದರು ಅನ್ನೋ ಮಾಹಿತಿಯೂ ಸಿಗುತ್ತದೆ. ವಿಷಯ ತಿಳಿಯುತ್ತಲೇ ಸೈನಿಕರು ಅವರಿಗಾಗಿ ಹುಡುಕಾಟ ನಡೆಸಿದರಂತೆ. ಮೂರು ದಿನಗಳ ಬಳಿಕ ಅವರೇ ಸೈನಿಕನೊಬ್ಬನ ಕನಸಿನಲ್ಲಿ ಬಂದು ತಮ್ಮ ಇರುವಿಕೆಯನ್ನು ತಿಳಿಸಿದರಂತೆ. ಆ ಜಾಗಕ್ಕೆ ಹೋಗಿ ನೋಡಿದಾಗ, ಹರ್ಭಜನ್ ಸಿಂಗ್ ಅವರ ಮೃತ ಶರೀರ ಪತ್ತೆಯಾಗಿತ್ತು ಎನ್ನಲಾಗಿದೆ.

ಇದನ್ನು ಓದಿ: ಸಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ತಮಟೆ ಶಿವಮ್ಮನ ಕಥೆ..!

ಸತ್ತ ಮೇಲೆ ನಿರ್ಮಾಣವಾಯಿತು ದೇವಸ್ಥಾನ

ನಿಧನಾನಂತರ ಹರ್ಭಜನ್ ಸಿಂಗ್ ಅವರು ಆಗಾಗ ಅಲ್ಲಿನ ಸೈನಿಕರ ಕನಸಿನಲ್ಲಿ ಬರತೊಡಗಿದರಂತೆ. ತನಗೆ ಸಮಾಧಿ ಕಟ್ಟಿಸಿಕೊಡುವಂತೆ ಕೇಳುತ್ತಿದ್ದರಂತೆ. ಅದರಂತೆ ಸಿಕ್ಕಿಂನ ನಾಥೂ ಲಾ ಪಾಸ್‍ನಲ್ಲಿ ಸಮಾಧಿಯೂ ನಿರ್ಮಾಣವಾಯಿತು. ದಿನಕ್ರಮೇಣ ಅಲ್ಲಿಗೆ ಬರುವವರ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದಂತೆ, 1982ರಲ್ಲಿ ದೇವಾಲಯವನ್ನೂ ನಿರ್ಮಿಸಲಾಯಿತು. ಈಗ ಪ್ರತಿದಿನ ಇಲ್ಲಿಗೆ ಸೈನಿಕರು ಮಾತ್ರವಲ್ಲ ನೂರಾರು ಭಕ್ತರು ಬರುತ್ತಾರೆ. ಈ ಮೂಲಕ ಸೈನಿಕ ಹರ್ಭಜನ್ ಸಿಂಗ್, ಸಂತ ಹರ್ಭಜನ್ ಸಿಂಗ್ ಆಗಿದ್ದಾರೆ.

ಈಗಲೂ ಕಾಣಿಸಿಕೊಳ್ಳುತ್ತಾರೆ ಬಾಬಾ ಹರ್ಭಜನ್!

ಚೀನಾ ಸೈನಿಕರು ಭಾರತದ ಗಡಿಯೊಳಕ್ಕೆ ನುಸುಳಿದರೆ, ಅಥವಾ ಗುಂಡಿನ ಕಾಳಗವೇನಾದರೂ ನಡೆಯುವ ಕುರಿತು ಎರಡು ಮೂರು ದಿನ ಮುಂಚಿತವಾಗಿಯೇ ಬಾಬಾ ಹರ್ಭಜನ್ ಸಿಂಗ್ ಭಾರತದ ಸೈನಿಕರ ಕನಸಿನಲ್ಲಿ ಬಂದು ಮುನ್ನೆಚ್ಚರಿಕೆ ನೀಡುತ್ತಾರಂತೆ. ಅಲ್ಲದೇ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಫ್ಲಾೃಗ್ ಮೀಟಿಂಗ್ ಸಮಯದಲ್ಲಿ, ಈಗಲೂ ಚೀನಾ ಸೈನಿಕರು ಬಾಬಾ ಹರ್ಭಜನ್ ಸಿಂಗ್ ಅವರಿಗೆಂದೇ ಒಂಚು ಕುರ್ಚಿಯನ್ನು ಖಾಲಿ ಇಡುತ್ತಾರೆ. ಅಲ್ಲದೇ ಈಗಲೂ ಅವರಿದ್ದ ಬ್ಯಾರಕ್ ಹಾಗೂ ಬೆಡ್‍ಅನ್ನು ಹಾಗೇ ಬಿಡಲಾಗಿದೆ. ಆಗಾಗ ಅಲ್ಲಿಗೆ ಬರುತ್ತಿರುತ್ತಾರೆ ಅನ್ನೋ ನಂಬಿಕೆ ಹಲವು ಸೈನಿಕರದ್ದು. ಅಷ್ಟೇ ಯಾಕೆ, ಪ್ರತಿ ವರ್ಷ ಸೆಪ್ಟೆಂಬರ್ 11ರಂದು ಬಾಬಾ ಹರ್ಭಜನ್ ಸಿಂಗ್ ಅವರಿಗೆ ಕೂಡಿಟ್ಟ ಉಡುಗೊರೆಗಳನ್ನು ತೆಗೆದುಕೊಂಡು ಸೈನಿಕರೇ ಅವರ ಹುಟ್ಟೂರಿಗೆ ಹೋಗಿ, ಅವರ ಕುಟುಂಬದವರಿಗೆ ಆ ಉಡುಗೊರೆಗಳನ್ನು ನೀಡುತ್ತಾರಂತೆ. ವಿಶೇಷ ಅಂದರೆ ರೈಲಿನಲ್ಲೂ ಬಾಬಾ ಹರ್ಭಜನ್ ಸಿಂಗ್ ಅವರಿಗೆ ಒಂದು ಸೆಪರೇಟ್ ಬರ್ತ್​ ಅನ್ನು ರಿಸರ್ವ್ ಮಾಡಲಾಗುತ್ತಂತೆ! ಇನ್ನು ಸಾಮಾನ್ಯವಾಗಿ ದೇವಸ್ಥಾನದಲ್ಲಿ ಇಡುವ ನೀರನ್ನು ಬಳಸುವುದರಿಂದ ಹಲವು ರೋಗ, ರುಜಿನಗಳು ವಾಸಿಯಾಗಿವೆ ಅನ್ನೋ ನಂಬಿಕೆಯಿದೆ. ಹೀಗಾಗಿಯೇ ಸಿಕ್ಕಿಂ ಮಾತ್ರವಲ್ಲ ದೇಶದ ಬೇರೆ ಭಾಗಗಳಿಂದಲೂ ಇಲ್ಲಿಗೆ ಬರುವ ಭಕ್ತರು ಒಂದೆರಡು ದಿನಗಳ ಕಾಲ ದೇವಸ್ಥಾನದಲ್ಲಿ ನೀರನ್ನು ಇಟ್ಟು, ನಂತರ ಆ ನೀರನ್ನು ಸೇವಿಸುತ್ತಾರೆ. ಹಲವು ವರ್ಷಗಳ ಕಾಲ ಪ್ರತಿ ತಿಂಗಳು ಸೈನಿಕರೇ ಸೇರಿ ಸ್ವಲ್ಪ ಹಣ ಸಂಗ್ರಹಿಸಿ, ಬಾಬಾ ಹರ್ಭಜನ್ ಸಿಂಗ್ ಅವರ ಕುಟುಂಬಕ್ಕೂ ನೀಡುತ್ತಿದ್ದರಂತೆ. ಜೊತೆಗೆ ಈಗಲೂ ಪ್ರತಿ ತಿಂಗಳು ಬಾಬಾ ಹರ್ಭಜನ್ ಸಿಂಗ್ ಅವರ ಅಕೌಂಟ್‍ಗೆ ಸಂಬಳ ಹಾಕಲಾಗುತ್ತಿದೆ ಎಂದೂ ಕೆಲ ಮೂಲಗಳ ಹೇಳುತ್ತವೆ.

ಹೀಗೆ ಗಡಿ ಕಾಯುವಾಗ ಜೀವ ತೊರೆದ ಸೈನಿಕನೊಬ್ಬ ಈಗ ಸತ್ತ ಮೇಲೂ ಆ ದೇಶಸೇವೆ ಮುಂದುವರೆಸಿದ್ದಾನೆ. ಸುಳ್ಳೋ ಅಥವಾ ನಿಜವೋ ಗೊತ್ತಿಲ್ಲ, ಆದರೆ ನಂಬಿಕೆಗಳನ್ನು ತೊಡೆಯುವವರಾರು?

ಇದನ್ನು ಓದಿ: 

1. ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!

2. ಐಎಎಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

3. ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್

Related Stories

Stories by YourStory Kannada