ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!

ಟೀಮ್​ ವೈ.ಎಸ್​. ಕನ್ನಡ

1

ದಕ್ಷಿಣ ಕನ್ನಡ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಬೆಳಪು ಗ್ರಾಮ ಪಂಚಾಯಿತಿ ಒಂದು ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ತನ್ನ ದಿಟ್ಟ ಹೆಜ್ಜೆ ಇಟ್ಟಿದೆ. ಅದೇನೆಂದರೆ ತನ್ನ ಸಂಪೂರ್ಣ ನಗದು ರಹಿತ ವ್ಯವಹಾರ ನಡೆಸುವ ರಾಜ್ಯ ಮತ್ತು ದೇಶದ ಮೊದಲ ಗ್ರಾಮ ಪಂಚಾಯಿತಿಯಾಗಿ ಹೊರ ಹೊಮ್ಮಿದೆ.

ಗ್ರಾಮದಲ್ಲಿ ಇತ್ತೀಚಿಗೆ ಕಾಪು ಕ್ಷೇತ್ರದ ಶಾಸಕ ವಿಜಯ್​ಕುಮಾರ್ ಸೊರಕೆ ಅವರು ನಗದು ರಹಿತ ವ್ಯವಹಾರಕ್ಕೆ ಚಾಲನೆ ನೀಡಿದ್ದು ಗ್ರಾಮಸ್ಥರು ಹತ್ತು ರೂಪಾಯಿನಿಂದ ಹತ್ತು ಸಾವಿರದ ವರೆಗೆಬ್ಯಾಂಕ್ ವ್ಯವಹಾರವನ್ನು ಕಾರ್ಡ್ ಮತ್ತು ಮೊಬೈಲ್ ಮೂಲಕ ಮಾಡುತ್ತಿದ್ದಾರೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸುಮಾರು ೧೭೦೦ ಕುಟುಂಬಗಳಲ್ಲಿ ಶೇ ೮೦ಕ್ಕಿಂತಲೂ ಹೆಚ್ಚು ಕುಟುಂಬಗಳೂ ಕಾರ್ಡ್ ವ್ಯವಹಾರನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೆಲವರು ನೆಟ್ ಬ್ಯಾಂಕಿಂಗ್​ನಂತಹ ಅಧುನಿಕ ಸೌಲಭ್ಯವನ್ನು ಉಪಯೋಗಿಸುತ್ತಿದ್ದಾರೆ.

ಮೊಬೈಲ್ ಇಂಟರ್​ನೆಟ್ ಫೇಮಸ್

ಈ ಗ್ರಾಮಪಂಚಾಯಿತಿಯಲ್ಲಿ ಎಲ್ಲದಕ್ಕಿಂತಲೂ ಹೆಚ್ಚು ಫೇಮಸ್ ಆಗಿರುವುದು ಮೊಬೈಲ್ ಇಂಟರ್​ನೆಟ್. ಅದಕ್ಕೆ ಇಲ್ಲಿರುವ ಜನರ ಬಳಿ ಸಾಧ್ಯವಾದಷ್ಟು ಹೆಚ್ಚು ಸ್ಮಾರ್ಟ್ ಫೋನ್​ಗಳಿವೆ. ಹಸು ಕೊಳ್ಳಲು, ಮನೆ ಕಟ್ಟಿಕೊಳ್ಳಲು ಸಾಲ ಕೊಡುವಂತೆ ಈ ಗ್ರಾಮ ಪಂಚಾಯಿತಿ ವತಿಯಿಂದ ಮೊಬೈಲ್ ಕೊಳ್ಳಲು ಸಾಲ ನೀಡಲಾಗಿದೆ. ಬೆಳಪು ಸೇವಾ ಸಹಕಾರಿ ಬ್ಯಾಂಕ್ ಮೂಲಕ ಮೊಬೈಲ್ ಖರೀದಿಗೆ ಬಡ್ಡಿ ರಹಿತ ಸುಲಭ ಕಂತುಗಳ ಸಾಲವನ್ನು ನೀಡಿ ನಗದು ರಹಿತ ವ್ಯವಹಾರನ್ನು ಪ್ರೋತ್ಸಾಹಿಸಲಾಗುತ್ತಿದೆ.

ಮೊಬೈಲ್ ಕೊಟ್ಟ ಮೇಲೆ ಇಂಟರ್​ನೆಟ್ ಕೊಡದಿದ್ದರೆ ಹೇಗೆ ಎಂದು ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮಪಂಚಾಯತಿ ಉಚಿತ ವೈಫೈ ಸೌಲಭ್ಯವನ್ನು ಸಹ ಒದಗಿಸಿದೆ. ಈಗಾಗಲೇ ಬೆಳಪು ಗ್ರಾಮ ಪಂಚಾಯಿತಿ ಸುತ್ತಮುತ್ತ ವೈಫೈ ಲಭ್ಯವಿದೆ. ಈ ಗ್ರಾಮದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನಗದು ರಹಿತ ಆನ್​ಲೈನ್ ವ್ಯವಹಾರಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಉಚಿತವಾಗಿ ಸ್ವೈಪಿಂಗ್ ಮಷಿನ್ ಅನ್ನು ಕೂಡ ನೀಡಿ ಅದರ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಪ್ರದಾನಿ ನರೇಂದ್ರ ಮೋದಿಯವರು ನಗದು ರಹಿತ ವ್ಯವಹಾರಕ್ಕೆ ಕರೆ ನೀಡಿದ್ದರಿಂದ ಪ್ರತಿಯೊಬ್ಬರೂ ನಗದು ರಹಿತ ವ್ಯವಹಾರ ನಡೆಸುವ ಅನಿವಾರ್ಯತೆ ಎದುರಾಯಿತು. ಆಗ ಬೆಳಪು ಗ್ರಾಮಪಂಚಾಯತ್​ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಬೆಳಪು ಗ್ರಾಮಪಂಚಾಯತ್​ ಅನ್ನು ನಗದು ರಹಿತ ಪಂಚಾಯಿತಿ ಮಾಡಲು ಪಣ ತೊಟ್ಟ ಈ ಕಾರ್ಯ ಮಾಡಿದ್ದಾರೆ. ಈಗಾಗಲೇ ಗ್ರಾಮಸ್ಥರಿಗೆ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯ ಒದಗಿಸಲು ಗ್ರಾಮಪಂಚಾಯತ್​ ಮತ್ತು ಕಳತ್ತೂರು ವಿಜಯಬ್ಯಾಂಕ್ ಶಾಖೆ ಜೊತೆ ಒಪ್ಪಂದವಾಗಿದೆ. ಗ್ರಾಮ ಪಂಚಾಯಿತಿಯ ಎಲ್ಲ ಕುಟುಂಬಗಳು ಈಗಾಗಲೇ ಬ್ಯಾಂಕ್ ಖಾತೆ ತೆರೆದಿದ್ದು, ಗ್ರಾಮ ಪಂಚಾಯಿತಿ ಕಚೇರಿ ಹತ್ತಿರವೇ ಎಟಿಎಂ ಕೂಡ ಆರಂಭವಾಗಿದೆ.

" ನರೇಂದ್ರ ಮೋದಿಯವರ ನಗದು ರಹಿತ ಸಮಾಜವನ್ನು ನಮ್ಮ ಗ್ರಾಮ ಪಂಚಾಯತ್​ಯಲ್ಲಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕು ಎಂದು ತೀರ್ಮಾನಿಸಿ ನಮ್ಮ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಗ್ರಾಮದಲ್ಲಿರುವ ವೃದ್ಧರಿಗೆ, ಅನಕ್ಷರಸ್ಥರಿಗೆ ಇದು ಕಷ್ಟವಾಗಬಹುದು. ಆದರೆ ಕನಿಷ್ಠ ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಸೌಲಭ್ಯ ಮತ್ತು ಅದನ್ನು ಬಳಸುವ ಬಗ್ಗೆ ತರಬೇತಿ ನೀಡುತ್ತಿದ್ದೇವೆ."
-ಡಾ. ದೇವಿಪ್ರಸಾದ್ ಶೆಟ್ಟಿ, ಗ್ರಾಪಂ ಅಧ್ಯಕ್ಷರು, ಬೆಳಪು

ಸಂಪೂರ್ಣ ವಿಮೆ

ಈ ಗ್ರಾಮ ಪಂಚಾಯಿತಿ ಬರೀ ನಗದು ರಹಿತ ಮಾತ್ರವಲ್ಲದೆ ಸಂಪೂರ್ಣ ವಿಮೆಗೊಳಪಟ್ಟ ಗ್ರಾಮಪಂಚಾಯತ್​ ಕೂಡ ಆಗಿದೆ. ಇಲ್ಲಿನ ಪ್ರತಿ ಕುಟುಂಬದ ಏಳು ಮಂದಿಗೆ ಭಾರತೀಯ ಜೀವ ವಿಮಾ ನಿಗಮದಿಂದ ವಿಮೆ ಮಾಡಿಸಲಾಗುತ್ತಿದೆ.

ಒಟ್ಟಿನಲ್ಲಿ ಡಿಜಿಟಲ್​ ವ್ಯವಹಾರ ಮತ್ತು ಡಿಜಿಟಲ್​ ಟ್ರಾನ್ಸ್​ಆ್ಯಕ್ಷನ್​ ದೇಶವೇ ಒಗ್ಗಿಕೊಳ್ಳುತ್ತಿದೆ. ನಿಧಾನವಾಗಿ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾ ಸಿಗುತ್ತಿದೆ. ಭಾರತ ಡಿಜಿಟಲ್​ ದೇಶವಾಗುವ ದಿನ ದೂರವಿಲ್ಲ.

ಇದನ್ನು ಓದಿ:

1. ಬಾಯಲ್ಲಿ ನೀರೂರಿಸುವ ದೋಸೆ- ಘಮಘಮ ಪರಿಮಳ ಬೀರುವ ಸಾಂಬಾರ್-ಇದು ಮನೆ ಬಿಟ್ಟು ಓಡಿ ಹೋದ ಜಯರಾಮ್ ಕಥೆ..!

2. ಚೆಕ್​ಇನ್ ಕೌಂಟರ್​ಗಳಲ್ಲಿ ಕಾಯಬೇಕಿಲ್ಲ : ಜಸ್ಟ್ ಫಿಂಗರ್ ಪ್ರಿಂಟ್ ಕೊಟ್ಟು ವಿಮಾನ ಏರುವ ಅವಕಾಶ..

3. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ..!