ಕಾರ್​ ಮೈಲೇಜ್​ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಓದಿ..!

ಟೀಮ್​ ವೈ.ಎಸ್​. ಕನ್ನಡ

1

ಕಾರು ಇಲ್ಲದೆ ಕಾರುಬಾರು ನಡೆಯೋದು ಇವತ್ತಿನ ದಿನದಲ್ಲಿ ಕೊಂಚ ಕಷ್ಟವೇ. ಒಂಚು ಚಿಕ್ಕ ಫ್ಯಾಮಿಲಿಗೆ ಒಂದು ಕಾರು ಬೇಕೇ ಬೇಕು ಅನ್ನುವ ಕಾಲ ಇದು. ಆದ್ರೆ ಮಧ್ಯಮ ವರ್ಗಕ್ಕೆ ಕಾರು ಖರೀದಿ ಮಾಡುವುದೇ ದೊಡ್ಡ ಸಾಧನೆ. ಹೀಗಾಗಿ ಮಂಟೈನೇನ್ಸ್​ ಮತ್ತು ಇತರೆ ಖರ್ಚುಗಳು ದುಬಾರಿ ಆಗುತ್ತಿವೆ. ಜೊತೆಗೆ ಇಂಧನದ ಬೆಲೆಗಳು ಕೂಡ ಗಗನಕ್ಕೇರಿವೆ. ಕಾರು ಬೇಕು ಅನ್ನುವ ಆಸೆ ಇದ್ರೂ ಅದನ್ನು ಪರ್ಚೇಸ್​ ಮಾಡುವ ಧೈರ್ಯ ಇಲ್ಲ. ಜೊತೆಗೆ ಮೈಲೇಜ್​, ಮೈಂಟೇನೆನ್ಸ್​ ಹೀಗೆ ಅನೇಕ ವಿಷಯಗಳ ಬಗ್ಗೆ ಚಿಕ್ಕ ಭಯ ಹುಟ್ಟುತ್ತದೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೊಲ್ ಬೆಲೆ ಲೀಟರ್​ಗೆ ಸರಿಸುಮಾರ 70 ರೂಪಾಯಿಗಿಂತ ಹೆಚ್ಚಾಗಿದೆ. ಇದರಿಂದ ವಾಹನ ಸವಾರರಾಗಿ ಒಳ್ಳೆ ಮೈಲೇಜ್ ಕೊಡುವ ವಾಹನ ಕೊಂಡುಕೊಳ್ಳಬೇಕು ಎಂಬ ಅಭಿಲಾಷೆ ಹೆಚ್ಚು. ಅದಕ್ಕೆ ತಕ್ಕಂತೆ ಸಿಲಿಕಾನ್ ಸಿಟಿ ಬೆಂಗಳೂರಿನ ರೇವಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಸುಮಾರು 200 ರಿಂದ 250 ಕಿಲೊಮೀಟರ್ ಮೈಲೇಜ್ ಕೊಡುವಂತಹ ಕಾರನ್ನು ಅಭಿವೃದ್ಧಿ ಪಡಿಸಿದ್ದಾರೆ.

ಪ್ರತಿ ಲೀಟರ್ ಪೆಟ್ರೋಲಿಗೆ 200-250 ಕಿ.ಮೀ. ಮೈಲೇಜ್ ಕೊಡುವ ಕಾರಿನ ಮಾದರಿಯನ್ನು ರೇವಾ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ಕಾರಿನ ವಿನ್ಯಾಸ ಶೇ.90 ಪೂರ್ಣಗೊಂಡಿದ್ದು, ಈ ಮಾದರಿ ಮುಂದಿನ ವರ್ಷ ಸಿಂಗಪುರದಲ್ಲಿ ನಡೆಯಲಿರುವ ‘ಶೆಲ್ ಎಕೊ ಮ್ಯಾರಾಥಾನ್’ ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನು ಓದಿ: ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿರುವ ರೇವಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ಅಮಾರ್ತ್ಯ ಸಾಹಾ ನೇತೃತ್ವದಲ್ಲಿ ಕಾಲೇಜಿನ ತಾಂತ್ರಿಕ ವಿಭಾಗದ ಸಹಾಯಕ ಪ್ರೊಫೆಸರ್​ಗಳಾದ ಶಾ ನವಾಜ್ ಪಾಟೀಲ್ ಮತ್ತು ಮೊಹಮದ್ ಇರ್ಫಾನ್ ಮಾರ್ಗದರ್ಶನದಲ್ಲಿ 12 ಮಂದಿಯ ತಂಡ ಈ ಆವಿಷ್ಕಾರ ಮಾಡಿದೆ. ‘ಅರ್ಬನ್ ಕಾನ್ಸೆಪ್ಟ್ ಕಾರ್’ ಎಂದು ಮಾದರಿಗೆ ಹೆಸರು ಕೊಡಲಾಗಿದೆ.

" ನಗರ ಪ್ರದೇಶದಲ್ಲಿ ವಾಹನಗಳ ಸಂಚಾರದಿಂದ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ‘ಅರ್ಬನ್ ಕಾನ್ಸೆಪ್ಟ್ ಕಾರ್’ ತಯಾರಿಸುತ್ತಿದ್ದೇವೆ. ಇದು ಉಳಿತಾಯದಿಂದ ಹಿಡಿದು ಪರಿಸರ ಸಂರಕ್ಷಣೆಯ ತನಕ ಎಲ್ಲಾ ಕಾರ್ಯವನ್ನು ನಿರ್ವಹಿಸಬಲ್ಲದು."
- ಅಮಾರ್ತ್ಯ ಸಾಹಾ, ಸಂಶೋಧನಾ ವಿದ್ಯಾರ್ಥಿ

ನಗರ ಪ್ರದೇಶಗಳಿಗೆ ಸೂಕ್ತವಾಗುವಂತೆ ಮತ್ತು ಅದಕ್ಕೆ ತಕ್ಕಂತೆಯೇ ಮೈಲೇಜ್ ಕೊಡುವ ಕಾರುಗಳ ಪ್ರದರ್ಶನನ್ನು ‘ಶೆಲ್’ ಕಂಪನಿ 2017ರ ಮಾರ್ಚ್ 16 ರಿಂದ 19ರವರೆಗೆ ಆಯೋಜಿಸಿದೆ. ಸುಮಾರು 20 ದೇಶಗಳಿಂದ 172 ತಂಡಗಳು ಭಾಗವಹಿಸುತ್ತಿವೆ. ಭಾರತದಿಂದ 18 ತಂಡಗಳು ಪಾಲ್ಗೊಳ್ಳುತ್ತಿದ್ದು, ಕರ್ನಾಟಕವನ್ನು ರೇವಾ ಕಾಲೇಜು ತಂಡ ಪ್ರತಿನಿಸುತ್ತಿದೆ.

" ಈ ಮೈಲೇಜ್​ ಕಾರು ಎರಡು ಆಸನಗಳನ್ನು ಒಳಗೊಂಡಿರಲಿದೆ. ಒಂದು ಲೀಟರ್ ಪೆಟ್ರೋಲ್​ಗೆ  ಸುಮಾರು 200 ರಿಂದ 250 ಕಿಲೋಮೀಟರ್​ ದೂರ ಸಾಗುವಂತೆ ವಿಶೇಷವಾಗಿ ಎಂಜಿನ್ ಅನ್ನು ತಯಾರಿಸಲಾಗುತ್ತಿದೆ. ಕಾರಿನ ವಿನ್ಯಾಸ ಶೇ.90ರಷ್ಟು ಪೂರ್ಣಗೊಂಡಿದ್ದು, ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ" 
- ಅಮಾರ್ತ್ಯ ಸಾಹಾ, ಸಂಶೋಧನಾ ವಿದ್ಯಾರ್ಥಿ

ತಂಡದ ಸದಸ್ಯರು

ಪಶ್ಚಿಮ ಬಂಗಾಳದ ಐವರು, ಉತ್ತರ ಪ್ರದೇಶದ ಇಬ್ಬರು, ಜಾರ್ಖಂಡ್ ಹಾಗೂ ಬಾಂಗ್ಲಾದೇಶದಿಂದ ತಲಾ ಒಬ್ಬ ವಿದ್ಯಾರ್ಥಿಗಳು ತಂಡದಲ್ಲಿದ್ದಾರೆ. ಮುಜಾಕ್ಕಿರ್ ಶರೀಫ್, ಮೊಹಮದ್ ಇರ್ಫಾನ್, ಎಸ್.ಕೆ. ಮೆಹಬೂಬ್ ಮೊರ್​ಶೆಡ್, ಮೊಹಮದ್ ಅತೀಫ್, ಟೊಯಡ್ ಹಾಲ್ಡರ್, ಸುಜೀತ್ ರಾಣಾ, ನಿತೇಶ್ ಕೆ.ಆರ್. ಪ್ರಜಾಪತಿ, ಮಾಯುಖ್ ತಾಲೂಕ್ದಾರ್, ಎಸ್ಕೆ ಮೊಸ್ಟಾಫ, ರೆಬು ನಾಸ್ಕಾರ್ ಈ ಸಂಶೋಧನಾ ತಂಡದ ಭಾಗವಾಗಿದ್ದಾರೆ. ಇವರೆಲ್ಲರೂ ಎಂಜಿನಿಯರಿಂಗ್​ ವಿದ್ಯಾರ್ಥಿಗಳು ಅನ್ನೋದು ಮತ್ತೊಂದು ವಿಶೆಷ.

ಎಂಜಿನ್ ವಿಶೇಷತೆಯೇನು?

ಈ ಕಾರಿಗೆ ಅಳವಡಿಸುವ ಎಂಜಿನ್ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಇರುವ ಎಂಜಿನ್​ಗಿಂತ ವಿಭಿನ್ನವಾಗಿದೆ. ಸಿಲಿಂಡರ್ ಹಾಗೂ ಅದರ ಹೆಡ್ ಅನ್ನು ಮಾರ್ಪಾಟು ಮಾಡಲಾಗಿದ್ದು, ಕಾರ್ಬೊರೇಟರ್ ಬದಲಿಗೆ ಎಲೆಕ್ಟ್ರಿಕಲ್ ಫ್ಯುಯಲ್ ಇಂಜೆಕ್ಷನ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಅದೇ ರೀತಿ ಹೆಚ್ಚು ಪವರ್ ಕೊಡುವ ರೀತಿಯಲ್ಲಿ ಎಗ್ಸಾಸ್ಟ್ ಪೈಪ್ ಅನ್ನು ರೂಪಿಸಲಾಗಿದೆ. ವಾಹನದ ಒಟ್ಟು ತೂಕ ಕಡಿಮೆ ಮಾಡಿ ಹೆಚ್ಚು ಮೈಲೇಜ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಈ ಕಾರು ಉಳಿದೆಲ್ಲಾ ಕಾರುಗಳಿಗಿಂತ ವಿಭಿನ್ನವಾಗಿದೆ.

ಒಟ್ಟಿನಲ್ಲಿ ಹೊಸ ಕಾರು ಕೊಳ್ಳುವ ಬಗ್ಗೆ ಯೋಚನೆ ಮಾಡುವವರು ಈಗ ವಿದ್ಯಾರ್ಥಿಗಳ ಸಂಶೋಧನೆಯ ಬಗ್ಗೆಯೂ ಒಂಚೂರು ಗಮನ ವಿಡಿ. ಮುಂದಿನ ದಿನಗಳಲ್ಲಿ ಇಂತಹ ಕಾರುಗಳಿಗೆ ಬೇಡಿಕೆ ಹೆಚ್ಚಾಗುವ ಬಗ್ಗೆ ಅನುಮಾನವೇ ಇಲ್ಲ.

ಇದನ್ನು ಓದಿ:

1. ಎಲ್ಲರಿಗೂ ಒಂದೇ ನಿಯಮ- ಬೀದಿ ಮಕ್ಕಳಿಗೂ “ಆಧಾರ್” ಸಂಭ್ರಮ

2. ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್

3. ನಮ್ಮಲ್ಲಿ ಇಲ್ಲದೇ ಇರೋದು ಮೈಕಲ್​ ಫೆಲ್ಫ್ಸ್​ರಲ್ಲಿ ಏನಿದೆ..?


Related Stories