ಪ್ರಧಾನಿಯ ಕನಸಿಗೆ ಮತ್ತಷ್ಟು ಬಣ್ಣ- ಬನಾರಸ್​ ವೈದ್ಯೆಯ ಬೇಟಿ ಬಚಾವೋ, ಬೇಟಿ ಪಡವೋಗೆ ವಿಶಿಷ್ಟ ಸೇವೆ..!

ಟೀಮ್​ ವೈ.ಎಸ್​. ಕನ್ನಡ

ಪ್ರಧಾನಿಯ ಕನಸಿಗೆ ಮತ್ತಷ್ಟು ಬಣ್ಣ- ಬನಾರಸ್​ ವೈದ್ಯೆಯ ಬೇಟಿ ಬಚಾವೋ, ಬೇಟಿ ಪಡವೋಗೆ ವಿಶಿಷ್ಟ ಸೇವೆ..!

Friday December 02, 2016,

3 min Read

ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ಗಾದೆಯೊಂದು ಸಂಸ್ಕೃತದಲ್ಲಿದೆ. ಎಲ್ಲಿ ನಾರಿಯನ್ನು ಗೌರವಿಸಲಾಗುತ್ತದೆಯೋ ಆ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಬಲ್ಲವರು ಹೇಳಿದ್ದಾರೆ. ಆದ್ರೆ ಈ ಮಾತನ್ನು ಪಾಲಿಸುವವರ ಸಂಖ್ಯೆ ಬಹಳ ಕಡಿಮೆ ಇದೆ. ಹೆಣ್ಣು ಮಕ್ಕಳೆಂದ್ರೆ ಮೂಗು ಮುರಿಯುವವರೇ ಜಾಸ್ತಿ. ಹೆಣ್ಣು ಭ್ರೂಣ ಹತ್ಯೆ ಸಂಖ್ಯೆ ಕಡಿಮೆಯಾಗಿದೆ, ಆದ್ರೆ ನಿಂತಿಲ್ಲ. ಆದಾಗ್ಯೂ ಕಳೆದ ಕೆಲ ವರ್ಷಗಳಿಂದ ಮಹಿಳೆಯರ ಉದ್ಧಾರಕ್ಕಾಗಿ ನಿರಂತರ ಪ್ರಯತ್ನ ನಡೆಯುತ್ತಿದೆ. ಇದ್ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೂ ಬಹುದೊಡ್ಡದು. ಹೆಣ್ಣು ಮಕ್ಕಳ ರಕ್ಷಣೆಗಾಗಿ ನರೇಂದ್ರ ಮೋದಿಯವರು ದೇಶದಾದ್ಯಂತ ಒಂದು ಆಂದೋಲನ ಶುರುಮಾಡಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ,ನಗರಗಳಲ್ಲಿ ಬೇಟಿ-ಬಚಾವೊ-ಬೇಟಿ ಪಡಾವೋ ಚಳುವಳಿಯನ್ನು ಹರಡಿ,ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆದಿದೆ.

image


ಮಹಿಳಾ ವೈದ್ಯೆಯೊಬ್ಬರು ವಾರಣಾಸಿಯಲ್ಲಿ ಈ ಚಳುವಳಿಯ ನೇತೃತ್ವ ವಹಿಸಿದ್ದಾರೆ. ಹೆಸರು ಶಿಪ್ರಾ ಧಾರ್. ಹೆಣ್ಣು ಮಕ್ಕಳ ರಕ್ಷಣೆಯೇ ಶಿಪ್ರಾ ಅವರ ಮುಖ್ಯ ಗುರಿ. ಅವರ ಈ ಗುರಿ ಒಂದು ಹೋರಾಟದ ರೂಪ ಪಡೆದಿದೆ. ತಮ್ಮ ಧ್ಯೇಯವನ್ನು ಪೂರ್ಣಗೊಳಿಸಲು ಜೀವನವನ್ನೇ ಧಾರೆ ಎರೆಯಲು ಶಿಪ್ರಾ ಸಿದ್ಧರಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಎಂ.ಡಿ. ಪದವಿ ಪಡೆದಿರುವ ಶಿಪ್ರಾ ಅವರಿಗೆ ವೈದ್ಯೆಯಾಗಿ ಹಣಗಳಿಸುವ ಆಸೆಯಿಲ್ಲ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಸಮಾಜಸೇವೆ ಮಾಡುವುದು ಅವರು ಉದ್ದೇಶವಾಗಿದೆ.

ಇದನ್ನು ಓದಿ: ಇವರು ಕೇವಲ ಆಟೋ ಡ್ರೈವರ್​ ಅಲ್ಲ- ಎಲ್ಲರಿಗೂ ಮಾದರಿ ವ್ಯಕ್ತಿ..!

ವೈದ್ಯಕೀಯ ಪದವಿ ಪೂರ್ಣಗೊಳಿಸಿದ ಶಿಪ್ರಾ,ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸಮಾಡುವ ಬದಲು ತಮ್ಮದೇ ಒಂದು ಆಸ್ಪತ್ರೆ ತೆರೆಯಬೇಕೆಂದು ನಿರ್ಧರಿಸಿದರು. ಆದರೆ ಕೆಲ ವರ್ಷದ ಹಿಂದೆ ಅವರ ಆಸ್ಪತ್ರೆಯಲ್ಲಿ ನಡೆದ ಘಟನೆ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತರಲು ಕಾರಣವಾಯ್ತು. ಅವರ ಜೀವನದ ದಿಕ್ಕನ್ನು ಬದಲಾಯಿಸಿತು.

" ಸುಮಾರು 2 ವರ್ಷದ ಹಿಂದೆ ಮಧ್ಯವಯಸ್ಕ ಮಹಿಳೆಯೊಬ್ಬಳು ಗರ್ಭಿಣಿ ಸೊಸೆಯೊಂದಿಗೆ ತಮ್ಮ ಆಸ್ಪತ್ರೆಗೆ ಬಂದಿದ್ದಳು. ಚಿಕಿತ್ಸೆ ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮೊಮ್ಮಗಳಾಗಿರುವುದಕ್ಕೆ ಖುಷಿಪಡುವ ಬದಲು ಅಜ್ಜಿ ಮಾತ್ರ ಕೋಪಗೊಂಡಿದ್ದಳು. ಹೆಣ್ಣು ಮಗುವಿಗೆ ಜನ್ಮ ನೀಡಿದ ಸೊಸೆಗೆ ಛೀಮಾರಿ ಹಾಕುವ ಜೊತೆಗೆ ನನಗೂ ಹಿಡಿಶಾಪ ಹಾಕುತ್ತಿದ್ದಳು’’

ಆ ಮಹಿಳೆಯ ಬೈಗುಳ ಆಸ್ಪತ್ರೆಯ ಚಿತ್ರಣವನ್ನೇ ಬದಲಾಯಿಸ್ತು. ಈ ಘಟನೆ ನಂತ್ರ ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣು ಮಕ್ಕಳ ಚಿಕಿತ್ಸೆಯನ್ನು ಉಚಿತವಾಗಿ ಮಾಡುವ ನಿರ್ಧಾರಕ್ಕೆ ಬಂದ್ರು ಶಿಪ್ರಾ. ಅಲ್ಲಿಂದ ಇಲ್ಲಿಯವರೆಗೂ ಹೆಣ್ಣು ಶಿಶುಗಳ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಉಚಿತ ಚಿಕಿತ್ಸೆಯೊಂದೇ ಅಲ್ಲ,6 ಮಕ್ಕಳ ಓದಿನ ಖರ್ಚನ್ನು ಶಿಪ್ರಾ ನೋಡಿಕೊಳ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಒಂದು ಶಾಲೆಯನ್ನು ತೆರೆಯುವ ಯೋಚನೆಯಲ್ಲಿದ್ದಾರೆ ಶಿಪ್ರಾ. ಬಡ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಲಿ ಎನ್ನುವ ಉದ್ದೇಶದಿಂದ ಶಾಲೆ ಆರಂಭಿಸಲು ಶಿಪ್ರಾ ಮುಂದಾಗಿದ್ದಾರೆ. ಶಿಪ್ರಾ ಅವರ ಈ ಕಾರ್ಯ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಕೆಲವು ಸಂಘ ಸಂಸ್ಥೆಗಳು ಶಿಪ್ರಾ ನೆರವಿಗೆ ಬಂದಿವೆ. ಇಷ್ಟೇ ಅಲ್ಲ ಆಸ್ಪತ್ರೆಗೆ ಬರುವ ಜನರ ಆಲೋಚನೆ ಕೂಡ ಬದಲಾಗ್ತಾ ಇದೆ. ಆಸ್ಪತ್ರೆಗೆ ಬರುವ ಲೀಲಾವತಿ ಹೀಗೆ ಹೇಳ್ತಾರೆ.

" ಈಗ ಹುಡುಗ ಆಗ್ಲಿ ಹುಡುಗಿಯೇ ಆಗಲಿ,ಯಾವುದೇ ವ್ಯತ್ಯಾಸವಿಲ್ಲ. ಹುಡುಗಿಯಾದ್ರೆ ಶಿಪ್ರಾ ಮೇಡಂ ಹಾಗೆಯೇ ವೈದ್ಯೆಯನ್ನಾಗಿ ಮಾಡುತ್ತೇನೆ’’

ಮನೆಯವರಿಂದ ಕಡೆಗಣಿಸಲ್ಪಟ್ಟ ಹೆಣ್ಣು ಮಕ್ಕಳ ಪರವಾಗಿ ಶಿಪ್ರಾ ಕೆಲಸ ಮಾಡ್ತಿದ್ದಾರೆ. ಇಲ್ಲಿಯವರೆಗೆ ಶಿಪ್ರಾ ಆಸ್ಪತ್ರೆಯಲ್ಲಿ 100ಕ್ಕೂ ಅಧಿಕ ಹೆಣ್ಣು ಮಕ್ಕಳು ಹುಟ್ಟಿವೆ. ಈ ಎಲ್ಲ ಶಿಶುಗಳ ಚಿಕಿತ್ಸೆಯನ್ನು ಉಚಿತವಾಗಿ ಮಾಡಿರುವ ಶಿಪ್ರಾ,ಕುಟುಂಬದವರಿಗೆ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.

image


ಹೆಣ್ಣು ಮಕ್ಕಳ ರಕ್ಷಣೆಗಾಗಿ ಕ್ಯಾಂಪೇನ್ ಮಾಡುತ್ತಿರುವ ಶಿಪ್ರಾ ಹಿಂದೆ ಅವರ ಪತಿ ಮನೋಜ್ ಶ್ರೀವಾಸ್ತವ್ ಅವರ ದೊಡ್ಡ ಕೊಡುಗೆಯಿದೆ. ಪತ್ನಿಯ ಪ್ರತಿ ಹೆಜ್ಜೆಗೂ ಬೆಂಬಲ ನೀಡುತ್ತಿರುವ ಮನೋಜ್ ಕೂಡ ಒಬ್ಬ ವೈದ್ಯರು. ಪತ್ನಿಯ ಕಾರ್ಯವನ್ನು ಶ್ಲಾಘಿಸಿಸುತ್ತಾರೆ

" ಹೆಣ್ಣು ಮಕ್ಕಳನ್ನು ರಕ್ಷಿಸಲು ಸಮಾಜದಲ್ಲಿ ಮಹತ್ವದ ಬದಲಾವಣೆ ತರುವ ಅವಶ್ಯಕತೆ ಇದೆ. ಈ ಕೆಲಸವನ್ನು ಮಾಡುತ್ತಿರುವ ಪತ್ನಿ ಶಿಪ್ರಾ ಬದಲಾವಣೆಯ ಸಂಕೇತವಾಗಿದ್ದಾರೆ’’.
- ಮನೋಜ್​ ಶ್ರೀವಾಸ್ತವ್​, ಶಿಪ್ರಾ ಪತಿ

ಹೆಣ್ಣು ಮಕ್ಕಳ ರಕ್ಷಣೆ ಹೊಣೆ ಹೊತ್ತಿರುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರ ಕಾರ್ಯಕ್ಷೇತ್ರ ಚಿಕ್ಕದಿದೆ. ಆದ್ರೆ ಹೆಣ್ಣು ಮಕ್ಕಳ ರಕ್ಷಣೆಗೆ ಅವರು ಕೈಗೊಳ್ಳುತ್ತಿರುವ ಯೋಜನೆಗಳಿಗೆ ಮಾತ್ರ ಗಡಿಯಿಲ್ಲ. ಶಿಪ್ರಾ ಅವರ ಒಂದು ಸಣ್ಣ ಪ್ರಯತ್ನ ಸಮಾಜಕ್ಕೆ ಕನ್ನಡಿಯಾಗಿದೆ. 

ಇದನ್ನು ಓದಿ:

1. ಅಭಿವೃದ್ಧಿಯ ಕನಸಿಗೆ ಬಡತನದ ಕಡಿವಾಣ- ಯೂನಿಸೆಫ್​ ವರದಿಯಲ್ಲಿ ಶಾಕಿಂಗ್​ ನ್ಯೂಸ್​

2. ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

3. 200 ಗರ್ಭಿಣಿಯರ ಜೀವ ಉಳಿಸಿದ ಆಪತ್ಬಾಂಧವ..