ಮನಸ್ಸಿದ್ದರೆ ಮಾರ್ಗ- ಕುಡಿಯುವ ನೀರಿನ ಸಮಸ್ಯೆ ಮೆಟ್ಟಿನಿಂತ ಸೋಮಾಪುರ

ಟೀಮ್​ ವೈ.ಎಸ್​. ಕನ್ನಡ

ಮನಸ್ಸಿದ್ದರೆ ಮಾರ್ಗ- ಕುಡಿಯುವ ನೀರಿನ ಸಮಸ್ಯೆ ಮೆಟ್ಟಿನಿಂತ ಸೋಮಾಪುರ

Saturday September 03, 2016,

4 min Read

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಾವು ಕೇಳಿದ್ದೇವೆ. ನೋಡಿದ್ದೇವೆ. ಆದ್ರೆ ಆ ಸಮಸ್ಯೆಯನ್ನು ಪರಿಹರಿಸುವಲ್ಲಿ ನಾವೆಷ್ಟು ಯಶಸ್ವಿ ಆಗಿದ್ದೇವೆ ಅನ್ನೋ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ನೀರಿನ ಸಮಸ್ಯೆಗಳಿಗೆ ನಮ್ಮಲ್ಲೇ ಉತ್ತರವಿದ್ದರೂ ಅದನ್ನು ಜಾರಿಗೆ ತರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದ್ರೆ ಗದಗ ಜಿಲ್ಲೆಯ ಸೋಮಾಪುರ ನೀರಿನ ಸಮಸ್ಯೆಗಳನ್ನು ಮೀರಿನಿಂತು ಜನರಿಗೆ ಹೊಸ ಜೀವನ ಕಲ್ಪಿಸಿದೆ. ಸೋಮಾಪುರದ ಪಾಲಿಗೆ ಮಳೆ ನೀರು ಕೊಯ್ಲು ಯಶಸ್ಸಿನ ಹಾದಿಗೆ ಮುನ್ನಡೆಯಲು ದಾರಿ ತೋರಿಸಿತು ಅನ್ನೋದರಲ್ಲಿ ಸಂದೇಹವೇ ಇಲ್ಲ.

ಇದನ್ನು ಓದಿ: 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

ಅಡವಿ ಸೋಮಾಪುರ ಗದಗ ಜಿಲ್ಲಾ ಕೇಂದ್ರದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಒಂದು ತಾಂಡಾ. ಒಂದು ಕಾಲದಲ್ಲಿ ಈ ಊರು ಕಾಡಿನ ಮಧ್ಯೆ ಇತ್ತು. ಆದ್ರೆ ಈಗ ಆ ಕಾಡಿನ ಕುರುಹೇ ಇಲ್ಲ. ಹೆಸರಲ್ಲಿ ಮಾತ್ರ ಅಡವಿ ಅನ್ನೋದಿದೆಯಷ್ಟೇ. ಸುಮಾರು 250 ಮನೆಗಳಿರುವ ಈ ಪುಟ್ಟ ಊರಿನಲ್ಲಿ 600 ಜನರಿದ್ದಾರೆ. ಬರುಡು ನೆಲದ ಈ ಊರಿನಲ್ಲಿ ಕುಡಿಯಲು ನೀರೇ ಇರಲಿಲ್ಲ. ನೀರಿಗಾಗಿ ಕಿಲೋಮೀಟರ್ ನಡೆದು ಹೋಗಬೇಕಾಗಿತ್ತು. ಹಾಗೆ ನಡೆದು ಹೋಗಿ ನೀರು ತರಬೇಕಿತ್ತು. ಬಿರು ಬೇಸಿಗೆಯಲ್ಲಂತೂ ಇಲ್ಲಿ ನೀರಿಗಾಗಿ ಅಕ್ಷರಶಃ ಹಾಹಾಕಾರ. ಇಂತಾ ಊರಿನಲ್ಲೀಗ ಮಿನರಲ್ ವಾಟರ್ ಸಿಗುತ್ತಿದೆ. ಊರಿನ ಪ್ರತಿಯೊಬ್ವರೂ ಸಂಸ್ಕರಿಸಿದ ಶುದ್ಧ ನೀರು ಕುಡಿಯುತ್ತಿದ್ದಾರೆ. ಇಂತದ್ದೊಂದು ಸಾಧನೆಗೆ ಕಾರಣವಾಗಿದ್ದು ಊರಿನ ಜನರ ಇಚ್ಛಾಶಕ್ತಿ ಮತ್ತು ಆ ಜನರಿಗೆ ರಿಲಯನ್ಸ್ ಫೌಂಡೇಷನ್ ಸಂಸ್ಥೆ ನೀಡಿದ ಬೆಂಬಲ. ಒಂದು ಹನಿಯೂ ನೀರಿಲ್ಲದ ಊರು ಸಾಧಿಸಿದ ಯಶೋಗಾಥೆಯ ಕಥೆ ಇಲ್ಲಿದೆ.

image


ಈ ಊರಿನ ಜನರಿಗೆ ಶುದ್ಧ ನೀರಿನ ಸೌಲಭ್ಯವಿಲ್ಲದೇ ಸದಾ ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಿದ್ದರು. ಊರಿನ ಪ್ರತಿಯೊಬ್ವರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದರು. ಇಂತಾ ಊರಿನಲ್ಲಿ ರಿಲಯನ್ಸ್ ಫೌಂಡೇಶನ್ ಒಮ್ಮೆ ಆರೋಗ್ಯ ಶಿಬಿರ ನಡೆಸಿತು. ಆಗ ತಿಳಿದ ವಿಷಯ ಅಂದ್ರೆ ಶುದ್ಧ ನೀರಿನ ಕೊರತೆಯಿಂದಾಗಿ ಈ ಊರಿನ ಜನರು ಹಲವು ಕಾಯಿಲೆಗೆ ತುತ್ತಾಗಿದ್ದಾರೆ ಅನ್ನೋದು. ನೀರಿನ ಕೊರತೆ ನೀಗಿಸಿದರೆ ಊರಲ್ಲಿ ಆರೋಗ್ಯ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ ಅನ್ನೋದನ್ನ ಮನಗಂಡ ಸಂಸ್ಥೆ ಊರಿನ ಜನರನ್ನೆಲ್ಲಾ ಒಗ್ಗೂಡಿಸಿತು.

image


ಸಮಸ್ಯೆ ಕುಡಿಯುವ ನೀರಿನದ್ದಷ್ಟೇ ಆಗಿರಲಿಲ್ಲ, ದಿನಬಳಕೆಗೂ ಆ ಊರಿನಲ್ಲಿ ನೀರಿರಲಿಲ್ಲ. ಹದಿನೈದೋ ಇಪ್ಪತ್ತೋ ದಿನಕ್ಕೆ ಪಂಚಾಯಿತಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಅದೂ ಶುದ್ಧ ಕುಡಿಯುವ ನೀರಾಗಿರಲಿಲ್ಲ. ಜೊತೆಗೆ ಬೇಕಾಗುವಷ್ಟು ನೀರೂ ಸಿಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ರಿಲಯನ್ಸ್ ಸಂಸ್ಥೆ ಊರಿನ ಜನರನ್ನು ಒಗ್ಗೂಡಿಸಿ ಜೀವಜಲದ ಕೇಂದ್ರ ಸ್ಥಾಪಿಸಲು ನಿರ್ಧಾರ ಮಾಡಿತು. ಮಳೆ ನೀರು ಸಂಗ್ರಹಿಸಿದರೆ ಊರಿನ ನೀರಿನ ಸಮಸ್ಯೆ ನೀಗಿಸುವ ಯೋಜನರಯೊಂದು ರೂಪಿತವಾಯ್ತು. ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಮಳೆ ನೀರು ಸಂಗ್ರಹಕ್ಕಾಗಿ ಊರಿನ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಶಾಲೆಯ ಚಾವಣಿ ಮೇಲೆ ಬೀಳುವ ಮಳೆ ನೀರು ಸಂಗ್ರಹಿಸಿದರೆ ಒಂದು ಬಾರಿಗೆ ಐವತ್ತು ಸಾವಿರ ಲೀಟರ್ ಗಳಷ್ಟು ನೀರು ಸಂಗ್ರಹಿಸಬಹುದು ಅನ್ನೋ ವಿಚಾರ ಪ್ರಸ್ತಾಪಿಸಿದಾಗ ಊರಿನ ಜನ, ಶಾಲಾ ಮುಖ್ಯೋಪಾಧ್ಯಾಯರು ಎಲ್ಲರೂ ಒಪ್ಪಿದರು. ನೀರು ಶುದ್ದೀಕರಣ ಘಟಕ ನೀಡುವ ಹೊಣೆ ಹೊತ್ತ ರಿಲಯನ್ಸ್ ಸಂಸ್ಥೆ ಊರಿನ ಶಾಲೆಯ ಆವರಣದಲ್ಲಿ ಒಂದು ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾದ ದೊಡ್ಡ ತೊಟ್ಟಿ ನಿರ್ಮಾಣಕ್ಕೆ ಮುಂದಾಯಿತು. ತೊಟ್ಟಿ ನಿರ್ಮಾಣಕ್ಕಾಗಿ ಊರಿನ ಯುವಕರನ್ನೇ ಬಳಸಿಕೊಳ್ಳಲಾಯ್ತು. ಶಾಲೆಯ ಚಾವಣಿಗಳಿಗೆ ಪೈಪ್, ಹರಿದು ಬರುವ ನೀರಿಗೆ ಫಿಲ್ಟರ್. ತೊಟ್ಟಿಯ ಒಳಭಾಗದ ಶುದ್ಧೀಕರಣ. ನೀರು ಮೇಲೆತ್ತುವ ಪಂಪ್ ಹೀಗೆ ಎಲ್ಲವೂ ಸಿದ್ಧ ಮಾಡಿಕೊಂಡು ನಿರ್ಮಾಣ ಕಾರ್ಯ ಆರಂಭಿಸಲಾಯಿತು. ಕೆಲವೇ ದಿನಗಳಲ್ಲಿ ಊರಿನಲ್ಲಿ ಮಳೆ ನೀರು ಸಂಗ್ರಹಿಸಿ ನೀರು ಶುದ್ದೀಕರಣ ಮಾಡುವ ಘಟಕ ನಿರ್ಮಾಣವಾಗೇ ಬಿಡ್ತು. ಈಗ ಊರಿನ ಪ್ರತೀ ಜನರಿಗೂ ಶುದ್ದ ಕುಡಿಯುವ ನೀರು ಲಭ್ಯವಾಗುತ್ತಿದೆ. ಕೇವಲ ಎರಡು ರೂಪಾಯಿಗೆ 20 ಲೀಟರ್ ನ ಶುದ್ಧ ನೀರನ್ನು ಘಟಕದ ಮೂಲಕ ಊರಿನ ಜನರಿಗೆ ನೀಡಲಾಗುತ್ತಿದೆ. ಹರಿದು ಹೋಗಿ ವ್ಯರ್ಥವಾಗುತ್ತಿದ್ದ ಮಳೆ ನೀರು ಇವತ್ತು ಈ ಊರಿನ ಜನರ ಬಾಯಾರಿಕೆಯನ್ನು ನೀಗಿಸುತ್ತಿದೆ. ಪ್ರತೀ ದಿನ ಎಂಬತ್ತು ನೀರಿನ ಕ್ಯಾನ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಸೋಮಾಪುರ ಗ್ರಾಮಪಂಚಾಯ್ತಿ ನೀರಿನ ಸರಬರಾಜು, ಮಾರಾಟ ಮತ್ತು ಘಟಕದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.

image


"ಮೊದಲೆಲ್ಲಾ ಶುದ್ಧವಿಲ್ಲದ ನೀರು ಕುಡಿಯುತ್ತಿದ್ದೆವು. ಮೂರ್ನಾಲ್ಕು ಕಿಲೋಮೀಟರ್ ದೂರ ಹೋಗಿ ನೀರು ತರುತ್ತಿದ್ದೆವು. ಆದ್ರೆ ಈಗ ನಮ್ಮ ಊರಿನಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ಈಗ ಸಿಹಿ ಮತ್ತು ಶುದ್ಧ ನೀರು ಸಿಗುತ್ತಿದೆ. ಮಳೆ ನೀರನ್ನೂ ಕೂಡ ಸಂಗ್ರಹಿಸಬಹುದು ಅನ್ನೋದನ್ನ ರಿಲಯನ್ಸ್ ಫೌಂಡೇಷನ್ ಸಂಸ್ಥೆ ನಮಗೆ ತೋರಿಸಿಕೊಟ್ಟಿದೆ. ಈಗ ನಮ್ಮೂರಿನ ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುತ್ತಿದೆ."
- ಮೋಹನ್ ಕುಮಾರ್, ಸೋಮಾಪುರ ನಿವಾಸಿ

ರಿಲಯನ್ಸ್ ಫೌಂಡೇಷನ್ ಗ್ರಾಮೀಣ ಭಾಗಗಳ ಜನರ ಜೀವನ ಮಟ್ಟದ ಸುಧಾರಣೆಗೆ ಪ್ರಯತ್ನ ಮಾಡುತ್ತಿದೆ. ಜನರ ಆರೋಗ್ಯ ಸುಧಾರಣೆಗಾಗಿ ಸೋಮಾಪುರದಲ್ಲಿ ಹೆಲ್ತ್ ಕ್ಯಾಂಪ್ ನಡೆಸಿದಾಗ ಆ ಊರಿನ ನೀರಿನ ಸಮಸ್ಯೆ ಅರ್ಥವಾಗಿತ್ತು. ಈ ಊರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವ ಯೋಜನೆಯನ್ನು ಜನರ ಮುಂದಿಡಲಾಯಿತು. ಇವತ್ತು ಅಂದುಕೊಂಡಿದ್ದು ಆಗಿದೆ. ಊರಿನ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿದೆ.

" ಶಾಲೆಯ ಆವರಣದಲ್ಲಿ ನೀರಿನ ಘಟಕ ನಿರ್ಮಾಣ ಮಾಡ್ತೀವಿ ಅಂದಾಗ ಮೊದಲಿಗೆ ನಮಗೂ ನಂಬಿಕೆ ಬಂದಿರಲಿಲ್ಲ. ಆದ್ರೆ ಯೋಜನೆಯ ಬಗ್ಗೆ ರಿಲಯನ್ಸ್ ಅಧಿಕಾರಿಗಳು ತಿಳಿಸಿದಾಗ ನನಗೆ ನಂಬಿಕೆ ಬಂತು. ಆಗ ನಾನು ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆದು ಘಟಕ ನಿರ್ಮಾಣಕ್ಕೆ ಅವಕಾಶ ಮಾಡಿಸಿಕೊಟ್ಟೆ. ಇವತ್ತು ನಮ್ಮ ಶಾಲಾ ಚಾವಣಿಯ ನೀರು ಇಡೀ ಊರಿಗೆ ಕುಡಿಯುವ ನೀರು ಸಿಗುವಂತೆ ಮಾಡುತ್ತಿದೆ. ನಾನು ಗದಗದಿಂದ ಈ ಊರಿಗೆ ಬರುತ್ತೇನೆ. ಮೊದಲು ನಾನು ಮನೆಯಿಂದಲೇ ಕುಡಿಯುವ ನೀರು ತರುತ್ತಿದ್ದೆ. ಆದ್ರೆ ಈಗ ಶಾಲೆಯಲ್ಲೇ ಶುದ್ಧ ಕುಡಿಯುವ ನೀರು ಸಿಗುತ್ತಿದೆ."
-ಆನಂದ್ ಅಡಪದ, ಶಾಲೆಯ ಮುಖ್ಯೋಪಾಧ್ಯಾಯ

ನೀರಿನ ಸೆಲೆಯೇ ಇಲ್ಲದ ಈ ಗ್ರಾಮದ ಜನರು ಇವತ್ತು ಕುಡಿಯಲು ಮತ್ತು ಅಡಿಗೆ ಮಾಡಲು ಶುದ್ಧ ನೀರನ್ನು ಬಳಸುತ್ತಿದ್ದಾರೆ. ಊರಿನ ಜನರ ಆರೋಗ್ಯದ ಮಟ್ಟವೂ ಸುಧಾರಿಸಿದೆ. ಸಾಧಿಸುವ ಛಲವಿದ್ದರೆ ಎಂತ ಸಮಸ್ಯೆಗೂ ಪರಿಹಾರ ಕಾಣಬಹುದು ಅನ್ನೋದನ್ನ ಈ ಊರಿನ ಜನ ರಿಲಯನ್ಸ್ ಸಂಸ್ಥೆಯೊಂದಿಗೆ ಸೇರಿ ಸಾಧಿಸಿ ತೋರಿಸಿದ್ದಾರೆ. ಈ ಯಶೋಗಾಥೆ ಇಂತಹ ಸಮಸ್ಯೆಯಿರುವ ಹಲವು ಊರಿನವರಿಗೆ ಮಾದರಿಯಾಗಲಿದೆ.

ಇದನ್ನು ಓದಿ:

1. "ಗೈಡ್​" ಟೆನ್ಷನ್​ ಬಿಟ್ಟುಬಿಡಿ- ವಸ್ತುಸಂಗ್ರಹಾಲಯದ ಮಾಹಿತಿ ನೀಡುವ ಆ್ಯಪ್​ ಡೌನ್​ಲೋಡ್​ ಮಾಡಿ..!

2. ಆರೋಗ್ಯದ ಹಿಂದಿದೆ ಮೇಕೆ ಹಾಲಿನ ರಹಸ್ಯ..!

3. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ