ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

ಟೀಮ್​ ವೈ.ಎಸ್​. ಕನ್ನಡ

2

ದೇಶ ಸುತ್ತಿನ ನೋಡು, ಕೋಶ ಓದಿ ನೋಡು ಅನ್ನುವ ಮಾತಿದೆ. ಆದ್ರೆ ಇವತ್ತು ಯಾರ ಬಳಿಯೂ ಸಮಯವಿಲ್ಲ. ದೇಶ ಸುತ್ತುವುದು ಬಿಟ್ಟುಬಿಡಿ, ಪಕ್ಕದ ಊರಲ್ಲಿ ಏನಿದೆ ಅನ್ನುವುದನ್ನು ಸರಿಯಾಗಿ ನೋಡಿ ಕೂಡ ಇರುವುದಿಲ್ಲ. ಕೋಶ ಓದುವ ಮಾತಿನ ಬಗ್ಗೆ ನೀವೇ ಆಲೋಚನೆ ಮಾಡಿ. ಒತ್ತಡದ ಜೀವನ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಂಡಿದೆ. ರಜಾ ಸಿಕ್ರೆ ಸಾಕು, ಯಾವುದಾದರೂ ಒಂದು ಜಾಗಕ್ಕೆ ಹೋಗಿ, ರಿಫ್ರೆಶ್ ಆಗಿ ಬರೋಣ ಅನ್ನೋ ಯೋಚನೆ ಮೂಡುವುದು ಸುಳ್ಳಲ್ಲ. ಆದ್ರೆ ಮನಸ್ಸಿನ ಒತ್ತಡವನ್ನು ದೂರ ಮಾಡುವ ಜಾಗ ಯಾವುದು ಅನ್ನುವುದನ್ನು ಹುಡುಕುವುದೇ ದೊಡ್ಡ ವಿಷಯ. ಗಂಟೆಗಟ್ಟಲೆ ಇಂಟರ್​ನೆಟ್​ ಮುಂದೆ ಕುಳಿತುಕೊಂಡು ಕೊನೆಗೆ ಯಾವುದೋ ಒಂದು ಸ್ಥಳಕ್ಕೆ ಹೋಗಿ ದುಡ್ಡು ಕಳೆದುಕೊಳ್ಳುವ ಜನರಿಗೇನು ಕಡಿಮೆ ಇಲ್ಲ. ಆದ್ರೆ ಕರ್ನಾಟಕದ ದಾಂಡೇಲಿಯ ದಟ್ಟ ಅರಣ್ಯದಲ್ಲಿ ಹೋಮ್ ಸ್ಟೇ ಒಂದು ತಲೆ ಎತ್ತಿದೆ. ಪ್ರವಾಸೋದ್ಯಮವನ್ನೇ ಆಧರಿಸಿಕೊಂಡು, ಸ್ಟಾರ್ಟ್ ಅಪ್ ಆರಂಭವಾಗಿದೆ. ಹೆಸರು "ನದಿ ಮನೆ". ಹೆಸರಿಗೆ ತಕ್ಕಂತೆ ನದಿಯ ಎದುರಿನಲ್ಲೇ ಹೋಮ್ ಸ್ಟೇ ಆರಂಭಿಸಲಾಗಿದೆ. ಎಲ್ಲಾ ಹೋಮ್ ಸ್ಟೇಗಳಿಗಿಂತ ವಿಭಿನ್ನ ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇರುವ ಜಾಗವಾಗಿ ಗಮನ ಸೆಳೆಯುತ್ತಿದೆ.

ಪತ್ರಕರ್ತನ ಸ್ಟಾರ್ಟ್​ಅಪ್ ಯತ್ನ

ನಿತ್ಯಹರಿದ್ವರ್ಣ ಕಾಡುಗಳ ಮಧ್ಯೆ ಪ್ರವಾಸೋದ್ಯಮವನ್ನು ನಂಬಿಕೊಂಡು "ನದಿಮನೆ"ಯನ್ನು ಆರಂಭಿಸಿದ್ದು ಓಂಕಾರ್ ಉಮೇಶ್. ವೃತ್ತಿಯಲ್ಲಿ ಪತ್ರಕರ್ತ. ಕಳೆದ 17 ವರ್ಷಗಳಿಂದ ಈ ವೃತ್ತಿ ಮಾಡುತ್ತಿದ್ದಾರೆ. ಟ್ರೈನಿ ರಿಪೋರ್ಟರ್​​ನಿಂದ ಹಿಡಿದು, ಮ್ಯಾನೇಜ್​ಮೆಂಟ್​ನ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಕೂಡ ಓಂಕಾರ್​ಗಿದೆ. ಕಳೆದ 15 ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡಿಕೊಂಡು, ಉದ್ಯೋಗವವನ್ನು ಕೂಡ ಜೊತೆಯಲ್ಲೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈಗ ಸ್ಟಾರ್ಟ್ ಅಪ್ ಉದ್ಯಮವಾಗಿ ದಾಂಡೇಲಿಯ, ದಟ್ಟ ಕಾನನದ ನಡುವೆ ನದಿಮನೆ ಅನ್ನುವ ಹೋಮ್ ಸ್ಟೇಯನ್ನು ಆರಂಭಿಸಿದ್ದಾರೆ.

ಎಲ್ಲಿದೆ ಮತ್ತು ಏನಿದೆ..?

ನದಿಮನೆ ಓಂಕಾರ್ ಉಮೇಶ್​ರ ಕನಸಿನ ಪ್ರಾಜೆಕ್ಟ್. ಪತ್ರಕರ್ತ ಆಗಿರುವಾಗಲೇ ದೇಶ, ವಿದೇಶಗಳಿಗೆ ಪ್ರವಾಸ ಮಾಡಿ, ವೈಲ್ಡ್ ಲೈಫ್ ಫೋಟೋಗ್ರಫಿಯ ಜೊತೆಗೆ ಜನರ ಬೇಕು-ಬೇಡಗಳನ್ನು ಅರಿತುಕೊಂಡಿದ್ದರು. ಪ್ರವಾಸಿಗರ ಮನ ಗೆಲ್ಲಲು ಏನು ಮಾಡಬೇಕು ಅನ್ನುವುದರ ಬಗ್ಗೆ ಸಾಕಷ್ಟು ಅಧ್ಯಯನ ಕೂಡ ಮಾಡಿದ್ದಾರೆ. ಹೀಗಾಗಿ ನದಿಮನೆಗೆ ಬರುವ ಅತಿಥಿಗಳಿಗೆ ಉತ್ತಮ ಆತಿಥ್ಯ ಸಿಗುವುದು ಗ್ಯಾರೆಂಟಿ. ಪ್ರಸಿದ್ಧ "ಕಾಳಿ ನದಿ"ಯ ಉಪನದಿಯಾಗಿರುವ "ಕನ್ಹೇರಿ" ನದಿಯು ತಟದಲ್ಲಿ ಓಂಕಾರ್ ಕನಸಿನ ನದಿಮನೆ ತಲೆ ಎತ್ತಿದೆ.

ಬೆಂಗಳೂರಿನಿಂದ ಸುಮಾರು 483 ಕಿಲೋಮೀಟರ್ ದೂರದಲ್ಲಿರುವ ನದಿಮನೆಯಲ್ಲಿ ಪ್ರವಾಸಿಗರಿಗೆ ಏನು ಬೇಕೋ ಅದೆಲ್ಲವೂ ಸಿಗುತ್ತದೆ. ಅಚ್ಚರಿ ಅಂದ್ರೆ ಪ್ರವಾಸ ಮಾಡುವುದು ಮನಸ್ಸಿನ ನೆಮ್ಮದಿಗಾಗಿ. ಆದ್ರೆ ಎಲ್ಲೇ ಹೋದ್ರೂ, ಮೊಬೈಲ್, ಟಿವಿಗಳ ಕಿರಿಕಿರಿ ಇದ್ದೇ ಇರುತ್ತದೆ. ಆದ್ರೆ "ನದಿಮನೆ" ಇರುವ ಸ್ಥಳದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದೇ ಅಪರೂಪ. ಪ್ರವಾಸಿಗರು ಪ್ರಕೃತಿಯನ್ನು ಮನಬಿಚ್ಚಿ ಆಸ್ವಾದಿಸಲಿ ಅನ್ನುವ ಉದ್ದೇಶದಿಂದ ಟಿವಿಯನ್ನು ಕೂಡ ದೂರ ಇಡಲಾಗಿದೆ, ಹೀಗಾಗಿ ಪ್ರವಾಸಿಗರು ಸುಂದರ ಪ್ರಕೃತಿಯ ಮಡಿಲಿನಲ್ಲಿ ಮನ ಬಿಚ್ಚಿ ರಿಲ್ಯಾಕ್ಸ್ ಆಗಬಹುದು. "ಕಾಳಿ ಹುಲಿ ಸಂರಕ್ಷಿತಾ" ಪ್ರದೇಶದಿಂದ ಕೆಲವೇ ಕೆಲವು ಕಿಲೋಮೀಟರ್ ದೂರದಲ್ಲಿರುವ "ನದಿಮನೆ" ಪ್ರವಾಸಿಗರ ಪಾಲಿಗೆ ಸ್ವರ್ಗ. ಅದೃಷ್ಟ ಚೆನ್ನಾಗಿ ಇದ್ದರೆ ನೀವಿದ್ದ ಜಾಗದಲ್ಲೇ ಜಿಂಕೆ ಮತ್ತು ಹಲವು ಜಾತಿಯ ಪಕ್ಷಿ ಪ್ರಬೇಧಗಳನ್ನು ಕೂಡ ಕಾಣಬಹುದು.

ಮೊಬೈಲ್ ಇಲ್ಲ, ಟೆನ್ಷನ್ ಇಲ್ಲ..!

ಇವತ್ತು ಮನುಷ್ಯ ಎದುರಿಗಿರುವವರ ಮುಖ ನೋಡುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಸ್ಕ್ರೀನ್ ನೋಡುವುದೇ ಹೆಚ್ಚಾಗಿದೆ. ಆದ್ರೆ "ನದಿಮನೆ"ಯ ಸುತ್ತಮುತ್ತ ಮೊಬೈಲ್ ನೆಟ್​ವರ್ಕ್ ಸ್ಟ್ರೆಂತ್ ಕಡಿಮೆ ಇದೆ. ಹೀಗಾಗಿ ಅಗತ್ಯ ಬಿದ್ರೆ ಮಾತ್ರ ಯಾವುದೋ ಒಂದು ಜಾಗಕ್ಕೆ ಹೋಗಿ ಫೋನ್ ಮಾಡಿ ವಾಪಾಸ್ ಬರಬಹುದು. ಹೀಗಾಗಿ ಪ್ರವಾಸಿಗರು ಕೇವಲ ಮನಸ್ಸಿಗೆ ಮುದ ನೀಡುವ ಕೆಲಸಗಳಲ್ಲಿ ಮಾತ್ರ ತೊಡಗಿಕೊಳ್ಳಬಹುದು. "ನದಿಮನೆ"ಗೆ ಒಮ್ಮೆ ಎಂಟ್ರಿಯಾಗಿ, ನಿಮಗೇನು ಬೇಕು ಅನ್ನುವ ಲಿಸ್ಟ್ ಕೊಟ್ರೆ ಸಾಕು ಓಂಕಾರ್ ಮತ್ತು ಅಲ್ಲಿನ ಕೆಲಸಗಾರರು ಪ್ರವಾಸಿಗರ ಸೇವೆಗೆ ಸದಾ ಸಿದ್ಧರಿರುತ್ತಾರೆ. "ಕಾಳಿ ನದಿ"ಯ ವಾಟರ್ Raftingನಿಂದ ಹಿಡಿದು, ವಾಪಸ್ಸು ಬರಲು ಮನಸ್ಸೇ ಆಗದ ಹಲವು ಪ್ರದೇಶಗಳ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ. ಹೊಟ್ಟೆ ಹಸಿದ್ರೆ ಹೊಟೇಲ್​ನಲ್ಲಿ ಊಟ ಮಾಡುವ ಹಂಗಿಲ್ಲ. ಶುಚಿಯಾದ ಮತ್ತು ಶುದ್ಧವಾದ ಆಹಾರ ನಿಮಗೆ ಸಿಕ್ಕೇ ಸಿಗುತ್ತದೆ. ರಾಜಾತಿಥ್ಯ ಮತ್ತು ರಾಜೋಪಚಾರ ಇವರ ಪಾಲಿಗೆ ಅತೀ ಮುಖ್ಯ

“ ಹಣಕ್ಕಿಂತ ಪ್ರೀತಿ ಮುಖ್ಯ. ಇಲ್ಲಿ ಬಂದ ಅತಿಥಿಗಳನ್ನು ನಾವು ನಮ್ಮ ಮನೆಯ ಸದಸ್ಯರೆಂದೇ ಪರಿಗಣಿಸುತ್ತೇವೆ. ಅವರ ಖುಷಿ ನಮ್ಮ ಖುಷಿ. ಅವೆಲ್ಲಕ್ಕಿಂತ ಮೇಲಾಗಿ ಅವರು ಇಲ್ಲಿಂದ ವಾಪಾಸ್ಸು ಹೋಗುವಾಗ, ಮತ್ತೊಮ್ಮೆ ಬರುತ್ತೇವೆ ಅನ್ನುವ ಮನಸ್ಸಿನಿಂದ ಹೊರಡಬೇಕು. ನಮ್ಮ ಆತಿಥ್ಯ ಅವರ ಒತ್ತಡಗಳನ್ನು ದೂರ ಮಾಡಬೇಕು ”
- ಓಂಕಾರ್ ಉಮೇಶ್, ನದಿಮನೆ ಮಾಲೀಕ

ಹೋಮ್ ಸ್ಟೇಗೆ ಸೀಮಿತವಲ್ಲ..!

ಅಂದಹಾಗೇ "ನದಿಮನೆ" ಕೇವಲ ಮೋಜು ಮಸ್ತಿಗೆ ಮಾತ್ರ ಸೀಮಿತವಾಗಿಲ್ಲ. ಪ್ರವಾಸಿಗರದ್ದು ಒಂದು ಟೇಸ್ಟ್ ಆಗಿದ್ದರೆ, ಕಲಿಯಬೇಕು ಅನ್ನುವ ಮನಸ್ಸಿನಿಂದ ಬರುವವರಿಗೂ ಇದು ಬೆಸ್ಟ್ ಪ್ಲೇಸ್. ಹೀಗಾಗಿ ಓಂಕಾರ್ ಉಮೇಶ್ "ಫೀಲ್ಡ್ ರಿಸರ್ಚ್ ಸ್ಟೇಷನ್" ಒಂದನ್ನು ಸ್ಥಾಪಿಸಿದ್ದಾರೆ. ಇಲ್ಲಿ ವನ್ಯ ಜೀವಿ ಮತ್ತು ಬಯೋ ಡೈವರ್ಸಿಟಿ ಬಗ್ಗೆ ಅಧ್ಯಯನ ಮಾಡಲು ಅವಕಾಶವಿದೆ. ದಾಂಡೇಲಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಇಂತಹ ಸಾಹಸಕ್ಕೆ ಕೈ ಹಾಕಿರುವುದು ಇದೇ ಮೊದಲು.

ಕಾಡಿನ ಬಗ್ಗೆ ಏನ್ ಕೇಳಿದ್ರು ಮಾಹಿತಿ ಮತ್ತು ಉತ್ತರ

ದಾಂಡೇಲಿಗೆ ಎಂಟ್ರಿಕೊಟ್ಟ ಮೇಲೆ ಅಲ್ಲಿನ ಕಾಡಿನೊಳಗೆ ಚಿಕ್ಕ ಜರ್ನಿ ಮಾಡಲೇ ಬೇಕು. ಅದಕ್ಕೆ ಗೈಡ್​ಗಳ ನೆರವು ಬೇಕೇ ಬೇಕು. ಆದ್ರೆ ಓಂಕಾರ್ ಜೊತೆಗಿದ್ರೆ ಎಲ್ಲವೂ ಸಿಕ್ಕಿ ಬಿಡುತ್ತದೆ. ಹಲವು ದೇಶಗಳನ್ನು ಸುತ್ತಿ ಬಂದಿರುವ ಓಂಕಾರ್​ಗೆ "ವೈಲ್ಡ್ ಲೈಫ್" ಮತ್ತು ಇತರೆ ವಿಷಯಗಳ ಬಗ್ಗೆ ಉತ್ತಮ ಅರಿವಿದೆ. ಅದರಲ್ಲೂ ಹಕ್ಕಿ, ಹಾವು, ಹುಲಿ ಚಿರತೆಗಳ ಬಗ್ಗೆ ಒಂಚೂರು ಕೇಳಿದ್ರೆ ಸಾಕು ಪ್ರವಾಸಿಗರಿಗೆ ತಿಳಿಯುವ ಹಾಗೇ, ಅವರದ್ದೇ ಭಾಷೆಯಲ್ಲಿ ಉತ್ತರ ಮತ್ತು ಮಾಹಿತಿ ನೀಡುತ್ತಾರೆ. ನಿಮಗೇನಾದ್ರೂ ಹೆಚ್ಚು ತಿಳಿದುಕೊಳ್ಳಬೇಕು ಅನ್ನುವ ಮನಸ್ಸಾಗಿ, ಪ್ರಶ್ನೆ ಕೇಳಿದ್ರೆ, ನೀವು ಸಾಕು ಅನ್ನುವಷ್ಟು ಮಾಹಿತಿಯನ್ನು ಓಂಕಾರ್ ನೀಡಬಲ್ಲರು.

“ವೈಲ್ಡ್ ಲೈಫ್ ಅಂದ್ರೆ ಕಾಡಿನ ಪ್ರಾಣಿಗಳ ಫೋಟೋಗ್ರಾಫಿ ಮಾಡೋದು ಅಂತ ಅಂದುಕೊಂಡಿದ್ದೆ. ಆದ್ರೆ ಈಗ ನನ್ನ ಯೋಚನೆ ಬದಲಾಗಿದೆ. ಪ್ರಕೃತಿಯ ಬಗ್ಗೆ ಕಲಿಯಲು ಬಹಳಷ್ಟಿದೆ. ಅದರ ಬಗ್ಗೆ ತಿಳಿದುಕೊಳ್ಳುತ್ತಾ ಹೋದ್ರೆ ಮತ್ತಷ್ಟು ವಿಷಯಗಳು ಸಿಗುತ್ತದೆ”
- ಪ್ರವಾಸಿಗ

ಸ್ಪೆಷಲ್ ಟ್ರೀಟ್ಮೆಂಟ್ , ಸ್ಪೆಷಲ್ ಪ್ಲೇಸ್

ಅತಿಥಿ ದೇವೋ ಭವ ಅನ್ನುವ ಧ್ಯೇಯವಾಕ್ಯವನ್ನು ಪಾಲಿಸುತ್ತಿರುವ ನದಿಮನೆ ಸಿಬ್ಬಂಧಿ ನಿಮ್ಮ ರಜಾದಿನಗಳನ್ನು ಪ್ರತಿದಿನ ನೆನಪಾಗುವಂತೆ ಮಾಡುತ್ತಾರೆ. ಟ್ರೆಕ್ಕಿಂಗ್, ರ್ಯಾಫ್ಟಿಂಗ್ ಮತ್ತು ಖುಷಿಯ ನಡುವೆ ಒಂಚೂರು ಜ್ಞಾನ ಸಿಗುವುದು ಗ್ಯಾರೆಂಟಿ. ಬೇಸಿಗೆ ರಜಾದಿನದ ಕೊನೆಯ ದಿನಗಳು ಬರುತ್ತಿವೆ. ಮನಸ್ಸು ರಿಲ್ಯಾಕ್ಸ್​ ಮಾಡಿಕೊಂಡು ಬರಲು ಒಂದ್ಸಾರಿ ದಾಂಡೇಲಿ ನದಿಮನೆಗೆ ಬೇಟಿ ನೀಡಿ.

ಇದನ್ನು ಓದಿ:

1. ಆಹಾರ ಪೋಲಾಗುವುದನ್ನು ತಡೆಯುವ ಪ್ಲಾನ್​- ಹಸಿದವರ ಹೊಟ್ಟೆ ತುಂಬಿಸ್ತಾರೆ ಶಿವಕುಮಾರ್​​

2. ಟೇಸ್ಟ್​ನಲ್ಲಿ ಸೂಪರ್, ಆರೋಗ್ಯಕ್ಕೆ ಕೊಡುತ್ತೆ ಎಕ್ಸಟ್ರಾ ಪವರ್- ಇದು ಸಿರಿಧಾನ್ಯಗಳ ಖದರ್

3. ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು 

Related Stories