ಅಂದು ವೇಶ್ಯೆ, ಇಂದು ಬಾಲಿವುಡ್ ಕಥೆಗಾರ್ತಿ..!

ಟೀಮ್​ ವೈ.ಎಸ್​.ಕನ್ನಡ

ಅಂದು ವೇಶ್ಯೆ, ಇಂದು ಬಾಲಿವುಡ್ ಕಥೆಗಾರ್ತಿ..!

Wednesday December 28, 2016,

3 min Read

ಆಕೆಗೆ ತನ್ನ ತಂದೆ, ತಾಯಿ ಯಾರು ಅಂತಲೇ ಗೊತ್ತಿಲ್ಲ. ಟೀನೇಜ್​ನಲ್ಲೇ ಡ್ಯಾನ್ಸ್ ಬಾರ್ ಸೇರಿದ್ದ ಆ ಹುಡುಗಿ 17ರ ಹರೆಯದರಲ್ಲಿ ವೇಶ್ಯಾ ವೃತ್ತಿಯಲ್ಲಿ ತೊಡಗಿದ್ದಳು. ಒಬ್ಬ ಹುಡುಗಿ ಎಷ್ಟೆಲ್ಲಾ ಕಷ್ಟ ಪಡಬಹುದೋ ಅಷ್ಟೆಲ್ಲಾ ನೋವುಗಳನ್ನು ಅನುಭವಿಸಿದಾಕೆ. ಇವತ್ತು ಬಾಲಿವುಡ್​ನ ಟಾಪ್ ಸ್ಕ್ರಿಪ್ಟ್ ರೈಟರ್. ಹಾಗಂತ ನಾವ್ ಯಾವುದೋ ಚಿತ್ರದ ರೀಲ್ ಸ್ಟೋರಿ ಹೇಳುತ್ತಿಲ್ಲ. ಬದಲಾಗಿ ಹತ್ತಾರು ಹಿಟ್ ಹಿಂದಿ ಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದಿರುವ ಶಗುಫ್ತಾ ರಫೀಕ್ ಅವರ ಜೀವನದ ನೈಜ ಕಥೆಯಿದು.

ಪ್ರತಿಯೊಬ್ಬರ ಜೀವನದಲ್ಲೂ ಹೋರಾಟ ಅನ್ನೋದು ಇದ್ದೇ ಇರುತ್ತದೆ. ಕೆಲವರು ಒಂದು ಹೊತ್ತಿನ ತುತ್ತು ಅನ್ನಕ್ಕೆ, ಮೈ ಮುಚ್ಚಲು ಬಟ್ಟೆ, ತಲೆ ಮೇಲೊಂದು ಸೂರಿಗೆ ಹೋರಾಟ ನಡೆಸಿದರೆ ಕೆಲವರು ಐಶಾರಾಮಿ ಬಂಗಲೆ, ಕಾರು, ಒಡವೆ, ಆಸ್ತಿ- ಪಾಸ್ತಿಗಾಗಿ ಸ್ಟ್ರಗಲ್ ಮಾಡುತ್ತಾರೆ. ಆದರೆ ಬಾಲಿವುಡ್ ಸ್ಕ್ರಿಪ್ಟ್ ರೈಟರ್ ಶಗುಫ್ತಾ ರಫೀಕ್ ಅವರ ಹೋರಾಟ ಇದೆಲ್ಲಕ್ಕಿಂತಲೂ ಭಿನ್ನ.

image


ಶಗುಫ್ತಾ ರಫೀಕ್. ಇವತ್ತು ಬಾಲಿವುಡ್​ನಲ್ಲಿ ದೊಡ್ಡ ಹೆಸರುಗಳಲ್ಲೊಂದು. ಅವರಿಗೇನು, ಕಲರ್​ಫುಲ್ ಹಿಂದಿ ಚಿತ್ರಗಳಿಗೆ ಬಣ್ಣ ಬಣ್ಣದ ಕಥೆಗಳನ್ನು ಬರೆದುಕೊಂಡು, ಫಿಲ್ಮ್ ಪಾರ್ಟಿಗಳಲ್ಲಿ ಓಡಾಡಿಕೊಂಡು ಆರಾಮಾಗಿದ್ದಾರೆ ಅಂದುಕೊಳ್ಳುವವರೆ ಹೆಚ್ಚು. ಆದರೆ ಶಗುಫ್ತಾ ಇತಿಹಾಸವನ್ನೊಮ್ಮೆ ಕೆದಕಿ ನೋಡಿದರೆ, ಎಂಥವರಿಗೂ ಶಾಕ್ ಆಗದೇ ಇರದು. ಒಬ್ಬರ ಜೀವನದಲ್ಲಿ ಹೀಗೂ ನಡೆಯುತ್ತಾ ಅನ್ನುವ ಆತಂಕ, ಆಕ್ರೋಶ ಹಾಗೂ ಅಸಹನೆಗಳು ಹುಟ್ಟಿಕೊಳ್ಳುತ್ತವೆ.

ಹೌದು, ಶಗುಫ್ತಾಗೆ ತನ್ನ ತಂದೆ- ತಾಯಿ ಯಾರು ಅನ್ನೋದೇ ಗೊತ್ತಿಲ್ಲ. ಅವರೇ ಹೇಳಿಕೊಂಡಿರುವ ಪ್ರಕಾರ ಅವರ ಹುಟ್ಟಿನ ಕುರಿತು ಮೂರು ಸ್ಟೋರಿಗಳಿವೆಯಂತೆ. ಅದರಲ್ಲೊಂದು ಶಗುಫ್ತಾಳ ಅಕ್ಕ ಮದುವೆಯಾಗೋಕೆ ಮುಂಚೆ ಹುಟ್ಟಿದ ಮಗು ಆಕೆ ಅನ್ನೋದು. ಮತ್ತೊಂದು ಒಬ್ಬ ಮಹಿಳೆ ಹಾಗೂ ಬ್ಯಾರಿಸ್ಟರ್ ನಡುವಿನ ಅನೈತಿಕ ಸಂಬಂಧದಿಂದಾಗಿ ಹುಟ್ಟಿದ ಮಗು ಶಗುಫ್ತಾ ಅಂತ. ಇನ್ನೊಂದು ಸ್ಲಮ್​ನಲ್ಲಿ ಹುಟ್ಟಿದ ಶಗುಫ್ತಾಳನ್ನು ಸಾಕಲಾಗದೇ ಆಕೆಯ ತಂದೆ- ತಾಯಿಯೇ ಎಲ್ಲೋ ಎಸೆದು ಹೋಗಿದ್ದರು ಎಂಬುದು. ಸಾಮಾನ್ಯವಾಗಿ ತಮ್ಮ ಕರಾಳ ಇತಿಹಾಸದ ಕುರಿತು ಮಾತನಾಡಲು ಹಿಂದೇಟು ಹಾಕುವ ಬಾಲಿವುಡ್ ಮಂದಿಯ ನಡುವೆ, ಖುದ್ದು ಶಗುಫ್ತಾ ಅವರೇ ಸಂದರ್ಶನವೊಂದರಲ್ಲಿ ತಮ್ಮ ಹೋರಾಟಗಳ ಕುರಿತು ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ.

image


ನೋವಿನಿಂದ ಕೂಡಿದ್ದ ಬಾಲ್ಯ

ಶಗುಫ್ತಾ ಬಾಲ್ಯ ನೋವು, ವೇದನೆಗಳಿಂದಲೇ ಕೂಡಿತ್ತು ಎಂದರೆ ತಪ್ಪಾಗಲಾರದು. ಕಾರಣ ಅವರ ಹುಟ್ಟು ಅನ್ನೋದನ್ನ ಮತ್ತೆ ಹೇಳಬೇಕಿಲ್ಲ. ಅನೈತಿಕ ಸಂಬಂಧದಿಂದ ಹುಟ್ಟಿದವಳು ಅಂತ ಬಾಲಕಿ ಶಗುಫ್ತಾಳನ್ನು ಜರಿದವರೇ ಹೆಚ್ಚು. ಹೀಗಾಗಿಯೇ ಆಕೆಯ ತಾಯಿಯಂತಿದ್ದ ಅಕ್ಕ ಮಾತ್ರ ಶಗುಫ್ತಾಳಿಗೆ ಆಸರೆ. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬ ಕಾರಣಾಂತರಗಳಿಂದ ಬಡತನದತ್ತ ಸಾಗಿತ್ತು. ಹೀಗಾಗಿ ಶಗುಫ್ತಾ ಚಿಕ್ಕ ವಯಸ್ಸಿನಲ್ಲೇ ಬಾರ್​ಗಳಿಗೆ ಹೋಗಿ ಡ್ಯಾನ್ಸ್ ಮಾಡತೊಡಗಿದಳು. ಈ ಮೂಲಕ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತಳು. ಅದು ಅಲ್ಲಿಗೇ ಮುಗಿಯದೇ ತನ್ನ 17ರ ವಯಸ್ಸಿನಲ್ಲಿ ಶಗುಫ್ತಾ ವೇಶ್ಯಾವೃತ್ತಿಗೂ ತೊಡಗಬೇಕಾಯ್ತು. ಆದರೂ ಹೇಗೋ ತನ್ನ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದೀನಲ್ಲಾ ಎಂಬ ತೃಪ್ತಿಯೊಂದಿಗೆ ಆಕೆ ದಿನದೂಡತೊಡಗಿದಳು. ಈ ವಿಷಯ ಮನೆಯವರಿಗೆ ಗೊತ್ತಿದ್ದರೂ, ಬೇರೆ ದಾರಿಯಿಲ್ಲದೆ ಅವರೂ ಸುಮ್ಮನಿದ್ದರು.

ಇದನ್ನು ಓದಿ: ಫ್ಲೈ ಓವರ್ ಕೆಳಗೆ ಊಟ ಹಾಕುವ ಅನ್ನದಾತ - ಫ್ಲೈ ಓವರ್​ ಕೆಳಗೆ ಅನ್ನ ಹಾಕುವ ಮಹಾಪುರುಷ

ನಿರ್ನಾಮವಾದ ಕುಟುಂಬ ಮತ್ತು ದುಬೈ ದಾರಿ

ಹೀಗೆ, ಅದಾಗಲೇ ಸಂಕಷ್ಟದಲ್ಲಿ ಸಿಲುಕಿದ್ದ ಶಗುಫ್ತಾಳ ಮೇಲೆ ಇನ್ಯಾರ ಕಣ್ಣು ಬಿತ್ತೋ, ಅದೊಂದು ದಿನ ಆಕೆಯ ತಂದೆ ಕುಡಿದ ಅಮಲಿನಲ್ಲಿ ಬಂದೂಕು ಹಿಡಿದು, ಶಗುಫ್ತಾ ಇಲ್ಲದಿದ್ದಾಗ ಇಡೀ ಕುಟುಂಬವನ್ನೇ ಶೂಟ್ ಮಾಡಿ ಕೊಂದುಬಿಟ್ಟ. ಅಲ್ಲಿಗೆ ಎಲ್ಲರೂ ಇದ್ದೂ ಅನಾಥೆಯಾಗಿದ್ದ ಶಗುಫ್ತಾ ಮತ್ತೊಮ್ಮೆ ಅನಾಥೆಯಾಗಿಬಿಟ್ಟರು. ಆದರೆ ಅಷ್ಟರಲ್ಲಾಗಲೇ ಅವರು ವೇಶ್ಯಾವೃತ್ತಿಯಲ್ಲಿ ತೊಡಗಿ 10 ವರ್ಷಗಳೇ ಕಳೆದಿದ್ದವು. ಆಗ ಪರಿಚಯದವರು ಅವರಿಗೆ ದುಬೈಗೆ ಹೋಗುವಂತೆ ಹೇಳಿದರು. ಅದರಂತೆ ಶಗುಫ್ತಾ ದುಬೈಗೆ ಹೋದರು. ಅಲ್ಲಿ ಡ್ಯಾನ್ಸ್ ಬಾರ್​ಗಳಲ್ಲಿ ಕೆಲಸ ಮಾಡತೊಡಗಿದರು.

ಬಾಲಿವುಡ್​ನಲ್ಲಿ ಅವಕಾಶ

ಕೆಲ ವರ್ಷಗಳ ಬಳಿಕ ಭಾರತಕ್ಕೆ ಬಂದ ಶಗುಫ್ತಾ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡಲು ಪ್ರಾರಂಭಿಸಿದರು. 2002ರ ಹೊತ್ತಿಗೆ ಅವರಿಗೆ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಮಹೇಶ್ ಭಟ್ ಪರಿಚಯವಾಯಿತು. ಅವರ ಬಳಿ ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದಾಗಿ ಕೇಳಿಕೊಂಡರು ಶಗುಫ್ತಾ. ಆದರೆ ಮೊದಲ ಅವಕಾಶಕ್ಕಾಗಿ ಅವರು 4 ವರ್ಷಗಳೇ ಕಾಯಬೇಕಾಯಿತು. 2006ರ "ವೋ ಲಮ್ಹೇ" ಚಿತ್ರದ ಮೂಲಕ ಶುಗುಫ್ತಾರ ಬದುಕುವಾಸೆ ಮತ್ತೆ ಚಿಗುರೊಡೆಯಿತು. ಬಾಲಿವುಡ್ ಕರಿಯರ್ ಪ್ರಾರಂಭವಾಯಿತು.

image


ಕ್ರಮೇಣ ಭಟ್ ಕ್ಯಾಂಪ್​ನ ಎಲ್ಲಾ ಚಿತ್ರಗಳಿಗೂ ಶಗುಫ್ತಾರೇ ಚಿತ್ರಕಥೆ, ಸಂಭಾಷಣೆ ಬರೆಯತೊಡಗಿದರು. ಆವಾರಾಪನ್, ಧೋಖಾ, ಶೋಬಿಜ್, ರಾಜ್ 2, ಜಿಸ್ಮ್ 2, ಮರ್ಡರ್ 2, ಜನ್ನತ್ 2, ರಾಜ್ 3 ಸೇರಿದಂತೆ 2014ರ ಸೂಪರ್​ಹಿಟ್ ಆಶಿಕಿ 2 ಚಿತ್ರಕ್ಕೂ ಶಗುಫ್ತಾ ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ. ಈ ಮೂಲಕ ಬಾಲಿವುಡ್​ ಸದ್ಯದ ಸಕ್ಸಸ್​ ಫುಲ್ ಸ್ಟೋರಿ ರೈಟರ್ ಸಾಲಿಗೆ ಅವರು ಸೇರಿದ್ದಾರೆ.

ಹೀಗೆ ಸಿನಿಮಾ ಸ್ಟೋರಿಗಳನ್ನೂ ಮೀರಿಸುವಂತಿರುವ ಶಗುಫ್ತಾರ ಜೀವನದ ಕಥೆ ಎಲ್ಲರಿಗೂ ಮಾದರಿಯೇ ಸರಿ. 50ರ ಹೊಸ್ತಿಲಲ್ಲಿರುವ ಅವರಿಗೆ ಈಗಲೂ ಮದುವೆಯಾಗಬೇಕು, ತನ್ನದೂ ಒಂದು ಕುಟುಂಬ ಇರಬೇಕು ಅನ್ನೋ ಆಸೆಯಿದೆ. ಆ ಆಸೆಗಳು ಆದಷ್ಟು ಬೇಗ ಈಡೇರಲಿ ಅಂತ ಹಾರೈಸೋಣ. ಜತೆಗೆ ಶಗುಫ್ತಾ ಈಗ ಡೈರೆಕ್ಟರ್ ಆಗ ಹೊರಟಿದ್ದಾರೆ. ಸುಮಾರು 15 ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಅವರು "ರೋಸ್" ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ರೋಸ್, ಅತ್ಯಾಚಾರಕ್ಕೊಳಗಾಗುವ ಮಹಿಳೆಯೊಬ್ಬಳು ಸೇಡು ತೀರಿಸಿಕೊಳ್ಳುವ ಕಥೆಯಂತೆ. ಅದೇನೇ ಇರಲಿ, ಸಾಕಷ್ಟು ನೋವುಗಳನ್ನುಂಡಿರುವ ಶಗುಫ್ತಾರಿಗೆ ಯಶಸ್ಸು ಲಭಿಸಲಿ.

ಇದನ್ನು ಓದಿ:

1. ಮಂಗಳ ಗ್ರಹದಲ್ಲಿ ಆಲೂ ಬೆಳೆ- ವಿಜ್ಞಾನಿಗಳ ಸಂಶೋಧನೆಯಿಂದ ಹುಟ್ಟಿಕೊಂಡ ಹೊಸ ಕನಸು 

2. ಟಿ ಶರ್ಟ್ ಮೇಲೆ ಕನ್ನಡ ಅಭಿಮಾನ- ಸ್ಟಾರ್ಟ್​ಅಪ್​ನ ಸಾಧನೆಗೆ ಗ್ರಾಹಕರು ಕೊಟ್ರು ಬಹುಮಾನ..!

3. ಸುಖ ನಿದ್ದೆಗೆ ಸೂಪರ್ ಆ್ಯಪ್..!