ಸ್ಯಾಂಡಲ್​ವುಡ್​ನಲ್ಲಿ ಟೆಕ್ಕಿಗಳ ಹವಾ- ಎಂಜಿನಿರಿಂಗ್​ ಕಲಿತ್ರೂ ಕಲೆಯೇ ಜೀವ..!

ಟೀಮ್​ ವೈ.ಎಸ್​. ಕನ್ನಡ

ಸ್ಯಾಂಡಲ್​ವುಡ್​ನಲ್ಲಿ ಟೆಕ್ಕಿಗಳ ಹವಾ- ಎಂಜಿನಿರಿಂಗ್​ ಕಲಿತ್ರೂ ಕಲೆಯೇ ಜೀವ..!

Thursday November 24, 2016,

2 min Read

ಸ್ಯಾಂಡಲ್​ವುಡ್​ನಲ್ಲಿ ಈಗ ಟೆಕ್ಕಿಗಳದ್ದೇ ಹವಾ. ಸಿನಿಮಾದಲ್ಲಿ ಆಸಕ್ತಿಯುಳ್ಳ ಅನೇಕ ಎಂಜಿನಿಯರ್​ಗಳು ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಬದ್ಮಾಶ್ ಚಿತ್ರದಲ್ಲಿ 11 ಟೆಕ್ಕಿಗಳು ಕೆಲಸ ಮಾಡಿದ್ದಾರೆ. ಎಂಜಿನಿಯರಿಂಗ್ ಓದಿ ಲಕ್ಷಾಂತರ ರೂಪಾಯಿ ಸಂಬಳ ಎಣಿಸುವ ಸಾಕಷ್ಟು ಟೆಕ್ಕಿಗಳು ಈಗ ಸಿನಿಮಾ ರಂಗದತ್ತ ಹೊರಳುತ್ತಿದ್ದಾರೆ. ಧನಂಜಯ ಅಭಿನಯದ ‘ಬದ್ಮಾಶ್’ ಚಿತ್ರ ಟೆಕ್ಕಿಗಳ ಕಾರಣದಿಂದಲೇ ಸುದ್ದಿಯಾಗಿದೆ.

image


ಹಾಡುಗಳು, ಟ್ರೈಲರ್ ಮತ್ತು ವಿಭಿನ್ನ ಪ್ರಚಾರದ ತಂತ್ರಗಾರಿಕೆಯಿಂದ ಗಮನ ಸೆಳೆದಿರುವ ಬದ್ಮಾಶ್ ಚಿತ್ರದಲ್ಲಿ ಟೆಕ್ಕಿಗಳು ಅದೆಂಥಾ ಮೋಡಿ ಮಾಡಿರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ರವಿ ಕಶ್ಯಪ್, ನಾಯಕ ನಟ ಧನಂಜಯ, ಲೈನ್ ಪ್ರೋಡ್ಯೂಸರ್​ಗಳಾದ ನಾಗಭೂಷಣ್, ಮಹೇಶ್, ವಿವೇಕ್, ಪ್ರಿಯಾಂಕಾ, ಚಿತ್ರಕಥೆ ಬರೆದಿರುವ ಸಂತೋಷ್, ಸಂಭಾಷಣೆಕಾರರಾದ ವಿನೋದ್, ಪ್ರತೀಕ್ ಮತ್ತು ಸಹ ನಿರ್ದೇಶಕ ಅನೂಪ್ ಹೀಗೆ ಒಟ್ಟು 11 ಮಂದಿ ಎಂಜಿನಿಯರಿಂಗ್ ಪಧವೀದರರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ.

" ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದಾಗಲೇ ಎಡಿಟಿಂಗ್, ಫೋಟೋಶಾಪ್ ಸೇರಿ ಸಾಕಷ್ಟು ಟೆಕ್ನಿಕಲ್ ಅಂಶಗಳನ್ನು ಕಲಿತಿರುತ್ತಾರೆ. ಹಾಗಾಗಿ ಅವರಿಗೆ ಸಿನಿಮಾದ ಟೆಕ್ನಿಕಲ್ ಅಂಶ ಬಹಳ ಬೇಗ ಅರ್ಥವಾಗುತ್ತದೆ. ಈ ಸಿನಿಮಾದಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದು ಕಾಕತಾಳಿಯವಷ್ಟೆ. ನಾನು ಇನ್ಫೋಸಿಸ್ ಕೆಲಸವನ್ನು ಬಿಟ್ಟು ನಟನಾಗಿದ್ದೇನೆ. ಬಣ್ಣದ ಸೆಳೆತ ಎಲ್ಲರನ್ನು ಸೆಳೆಯುತ್ತದೆ." 
- ಧನಂಜಯ, ನಟ

ಸಾಮಾನ್ಯವಾಗಿ ಎಂಜನಿಯರಿಂಗ್ ಅಥವಾ ಬೇರಾವುದೇ ಟೆಕ್ನಿಕಲ್ ಕೋರ್ಸ್ ಮಾಡಿದವರಿಂದ ಸಿನಿಮಾಕ್ಕೆ ತಾಂತ್ರಿಕ ನೆರವಷ್ಟೇ ಪಡೆಯಲಾಗುತ್ತದೆ. ಇತ್ತೀಚೆಗೆ ಟೆಕ್ಕಿಗಳು ಹೆಚ್ಚು ಹೆಚ್ಚಾಗಿ ಸಿನಿಮಾದ ನಾನಾ ವಿಭಾಗಗಗಳಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಮಿಗಿಲಾಗಿ ಎಂಜನಿಯರ್​ಗಳು ಕ್ಯಾಮೆರಾ ಟೆಕ್ನಾಲಜಿ ಹಾಗೂ ಎಡಿಟಿಂಗ್ ಕುರಿತು ಅಭ್ಯಾಸ ಮಾಡಿರುತ್ತಾರೆ. ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಿರು ಚಿತ್ರಗಳ ನಿರ್ಮಾಣವೂ ಅಧ್ಯಯನದ ಭಾಗವಾಗಿರುತ್ತದೆ. ಹೀಗಾಗಿ ಅವರಿಗೆ ಸಿನಿಮಾ ಬಗ್ಗೆ ಸಹಜವಾಗಿ ಆಸಕ್ತಿ ಬರುತ್ತದೆ. ಇನ್ನು ಇವರಿಗೆ ಮಾತೃಭಾಷೆ ಕನ್ನಡ ಚೆನ್ನಾಗಿ ಬಂದರೆ ಮತ್ತಷ್ಟು ಸುಲಭ. ಹೀಗಾಗಿ ಅವರು ಡೈಲಾಗ್ ಮತ್ತು ಚಿತ್ರಕಥೆ ಬರೆಯುವುದಕ್ಕೂಈ ಹೆಜ್ಜೆ ಇರಿಸಿದ್ದಾರೆ. ಬದ್ಮಾಶ್ ಚಿತ್ರದಲ್ಲಿ ಡೈಲಾಗ್ ಮತ್ತು ಚಿತ್ರಕಥೆ ಬರೆದಿರುವುದು ಸಂತೋಷ್, ವಿನೋದ್, ಪ್ರತೀಕ್ ಎಂಬ ಯುವ ಟೆಕ್ಕಿಗಳು.

image


ನಿರ್ದೇಶಕ ಆಕಾಶ್ ಶ್ರೀವತ್ಸ ‘ಸುಳ್ಳೇ ಸತ್ಯ’ ಎಂಬ ಕಿರು ಚಿತ್ರ ಮಾಡಿದಾಗ ನಿರ್ಮಾಪಕ ರವಿ ಕಶ್ಯಪ್ ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಮಾಡಲು ಮುಂದೆ ಬಂದರು. ಈ ರೀತಿ ಒಬ್ಬರಿಗೊಬ್ಬರ ಒಬ್ಬರಿಗೊಬ್ಬರು ಜತೆಯಾಗಿ ಈಗ ಒಟ್ಟಿಗೆ ಹನ್ನೊಂದು ಟೆಕ್ಕಿ ಜತೆಯಾಗಿದ್ದಾರೆ.

" ನಾವೆಲ್ಲಾ ಒಟ್ಟಿಗೆ ಸೇರಿದ್ದು, ಒಂದು ಕಾಕತಾಳಿಯ ಎಂದೇ ಹೇಳಬಹುದು. ಎಂಜಿನಿಯರಿಂಗ್​ ವಿದ್ಯಾರ್ಥಿಗಳೆಲ್ಲಾ ಒಟ್ಟಾರಿ ಸೇರಿರುವುದು ಒಂದು ರೀತಿಯಲ್ಲಿ ಆರ್ಗನೈಸ್ಡ್​ ಆಗಿ ನಡೆಯಲು ಸಹಾಯವಾಗಿದೆ ಎಂದೇ ಹೇಳಬಹುದು. ನಾನು 2005ರಲ್ಲಿ ಎಂಜಿನಿಯರಿಂಗ್​ ಮುಗಿಸಿ ಬಂದಾಗ ಸಾಕಷ್ಟು ಜನ ನನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗುತ್ತದೆ, ಸಿನಿಮಾ ಬೇಡ ಎಂದು ಹೇಳಿದ್ದರು. ನಾನು ನನ್ನ ಪ್ರಯತ್ನವನ್ನು ಮುಂದುವರೆಸಿದ್ದೇನೆ. ಈಗ ಬದ್ಮಾಶ್​ ಮೂಲಕ ನನ್ನ ಕನಸು ನನಸಾಗಿದೆ. "
- ಆಕಾಶ್​ ಶ್ರೀವತ್ಸ, ನಿರ್ದೇಶಕ

ಟೆಕ್ಕಿಗಳ ಈ ಸಿನಿಮಾ ಹುಚ್ಚು ಸ್ಯಾಂಡಲ್​ವುಡ್​ ಅಂಗಳದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಪದವಿ ಯಾವುದಾದರೇನು, ಕಲೆ ಯಾರಿಗೆ ಬೇಕಾದ್ರೂ ಒಲಿಯುತ್ತದೆ ಅನ್ನೋದನ್ನ ಈ 11 ಟೆಕ್ಕಿಗಳು ಮಾಡಿ ತೋರಿಸಿದ್ದಾರೆ.

ಇದನ್ನು ಓದಿ:

1. ಮುಖಬೆಲೆ ಎರಡೇ ಸಾವಿರ ರೂಪಾಯಿ- ಆದ್ರೆ ಫ್ಯಾನ್ಸಿ ನಂಬರ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​..!

2. ಸ್ಮಾಲ್ ಸ್ಕ್ರೀನ್​ ಸೂಪರ್ ಸ್ಟಾರ್ - ಮಾತಿನಲ್ಲೇ ಪಟಾಕಿ ಸಿಡಿಸೋ ಆ್ಯಂಕರ್..!​

3. ಇದು ಸ್ಟಿಕ್ಕರ್​ ಹಿಂದಿರುವ ಕಥೆ..! ಕರಣ್​ ಶ್ರಮದ ಚರಿತ್ರೆ..!