ಜಾಗತಿಕ ಭಾವೈಕ್ಯ ಸಾರುವ "ದಿ ಒನ್ ಸಾಂಗ್"

ಟೀಮ್​ ವೈ.ಎಸ್​.ಕನ್ನಡ

1

ವಿಶ್ವದಲ್ಲಿ ವಿವಿಧ ಮನಸ್ಥಿತಿಯ ಜನರಿದ್ದಾರೆ. ಒಬ್ಬರಿಗೆ ಇಷ್ಟವಾಗಿದ್ದು ಇನ್ನೊಬ್ಬರಿಗೆ ಹಿಡಿಸಲು ಸಾಧ್ಯವಿಲ್ಲ. ಒಬ್ಬರು ಯೋಚನೆ ಮಾಡಿದಂತೆ ಮತ್ತೊಬ್ಬರು ಯೋಚಿಸಲು ಸಾಧ್ಯವಿಲ್ಲ. ಪ್ರಾಣಿ, ಪಕ್ಷಿ, ಮನುಷ್ಯ ಕುಲ ಹೀಗೆ ಎಲ್ಲವೂ ವಿಭಿನ್ನ. ಆದ್ರೆ ಜಗತ್ತಿನಲ್ಲಿ ನಾವೆಲ್ಲರೂ ಒಂದೇ. ದೇಶ, ಭಾಷೆ ಮತ್ತು ವೃತ್ತಿ ಬೇರೆ ಬೇರೆ ಆಗಿರಬಹುದು. ಜಾತಿ, ಮತಗಳಲ್ಲಿ ವಿಂಗಡಣೆ ಆಗಿದ್ದಿರಬಹುದು. ಆದ್ರೆ ಕೊನೆಯಲ್ಲಿ ವಸುದೈವ ಕುಟುಂಬಕಂ ಅನ್ನುವುದನ್ನು ಪರೆಯುವ ಹಾಗಿಲ್ಲ.

 ಜಗತ್ತಿನಲ್ಲಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಹೊತ್ತ ಹಾಡೊಂದು ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲದೇ ಈ ಹಾಡಿನಲ್ಲಿ 150 ಕಲಾವಿದರು ಇದ್ದಾರೆ ಎಂಬುದೇ ವಿಶೇಷ. ಇದಕ್ಕೆ ‘ದಿ ಒನ್ ಸಾಂಗ್’ಎಂಬ ಹೆಸರನ್ನಿಟ್ಟು ಈ ಪ್ರಾಜೆಕ್ಟನ್ನು ಪ್ರಪಂಚದ ಗಮನವನ್ನು ಸೆಳೆಯಲು ಸಜ್ಜಾಗಿದ್ದಾರೆ ನಿಹಾರ್-ವರುಣ್‌ ಎಂಬ ಸ್ನೇಹಿತರು. ನಾವೆಲ್ಲರೂ ಒಂದೇ ಎನ್ನುವ ಐಕ್ಯತೆ ಸಂದೇಶ ಸಾರುವ 150 ಕಲಾವಿದರನ್ನು ಒಳಗೊಂಡ ‘ದಿ ಒನ್ ಸಾಂಗ್’ ಪ್ರಾಜೆಕ್ಟ್ ಪ್ರಪಂಚದಾದ್ಯಂತ ಗಮನ ಸೆಳೆಯಲು ಸಜ್ಜಾಗಿದೆ.

ಬನ್ನಿ ಮುಂದೆ, ಹೇಳಿ ಇಂದೇ, ನಾವೆಲ್ಲ ಒಂದೇ ಎನ್ನುವ ಥೀಮ್ ಮೂಲಕ ಜಗತ್ತಿನಾದ್ಯಂತ ಗಮನ ಸೆಳೆಯುಲು ಸಿದ್ಧವಾಗಿದೆ ‘ದಿ ಒನ್ ಸಾಂಗ್. ಸಂಗೀತ ನಿರ್ದೇಶಕ ದ್ವಯರಾದ ನಿಹಾರ್-ವರುಣ್ ಅವರ ಕನಸಿನ ‘ದಿ ಒನ್ ಸಾಂಗ್’ ವಿಡಿಯೋ ಸಾಂಗ್ ಪ್ರಾಜೆಕ್ಟ್ ಇದೀಗ ಸಿದ್ಧವಾಗಿದ್ದು, ಇದು ಕನ್ನಡದಿಂದ ಆರಂಭವಾಗಿ ಭಾರತೀಯ ಇತರೇ ಭಾಷೆಗಳು ಸೇರಿದಂತೆ ವಿದೇಶಿ ಭಾಷೆಗಳಲ್ಲೂ ಧ್ವನಿಸಲಿದೆ. ಬೆಂಗಳೂರಿನಲ್ಲಿರುವ ವಿದೇಶಿಯರೇ ಇದಕ್ಕೆ ಕಂಠದಾನ ಮಾಡಲಿದ್ದಾರೆ ಎಂಬುದು ಈ ಆಲ್ಬಂನ ವಿಶೇಷ.

 " ವಿಶೇಷ ಚೇತನ ಮಕ್ಕಳಿಂದ ಉತ್ತೇಜಿತರಾದ ನಾವು ಈ ಹಾಡನ್ನು ಮಾಡಿದ್ದೇವೆ. ಈ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ನಾವು ಜಗತ್ತಿಗೆ ಸಾರಲು ಹೋರಟಿದ್ದೇವೆ."
- ನಿಹಾರ್ ಹಾಗೂ ವರುಣ್, ಸಂಗೀತ ಸಂಯೋಜಕರು

ಕನ್ನಡದ ಗೀತೆಯೊಂದು ಜಗತ್ತಿನ ಇತರೇ ಭಾಷಿಕರನ್ನು ಸೆಳೆಯಲು ಮುಂದಾಗಿದ್ದು, ಈ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ಹೇಳಲು ಹೊರಟಿರುವುದೇ ಈ ಗೀತೆಯ ಹೆಚ್ಚುಗಾರಿಕೆ. ಮಮತೆಯ ಪ್ರೀತಿ ನೀಡಿ, ಸತ್ಯದ ಅರಿವನ್ನು ಮೂಡಿಸಿ ಎನ್ನುತ್ತಾ ಕಿರಿಯ ಕಲಾವಿದರಿಂದ ಹಿಡಿದು ಹಿರಿಯ ಕಲಾವಿದರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

ಇದನ್ನು ಓದಿ: 5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

ಏನಿದರ ಮಹತ್ವ?

ಈ "ದಿ ಒನ್‌ ಸಾಂಗ್‌"ನಲ್ಲಿ ನಾವೆಲ್ಲರೂ ಒಂದೇ ಎಂಬುದು ನಾನಾ ಭಾಷೆಗಳಲ್ಲಿ ಬದಲಾಗುತ್ತದೆ. ಅದಕ್ಕೆ ಆಯಾ ಭಾಷೆಯ ಕಲಾವಿದರು ದನಿಯಾಗುತ್ತಾರೆ. ಇದರಲ್ಲಿ ಕನ್ನಡ ಸೇರಿ ಇತರೇ ಭಾಷೆಗಳ ಸುಮಾರು 150 ಕಲಾವಿದರು ಹಾಡಿದ್ದಾರೆ. ಅಲ್ಲದೆ ಬೇರೆ ಬೇರೆ ವಾದ್ಯ ಸಂಗೀತಗಳನ್ನು ಬಳಸಲಾಗಿದೆ. ಎಲ್ಲ ಪ್ರಕಾರದ ಸಂಗೀತವನ್ನೂ ಇಲ್ಲಿ ಅಳವಡಿಸಲಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ.

ಸಿನಿ- ಸಂಗೀತ ಕಲಾವಿದರ ಸಂಗಮ

ಹಾಡಿನಲ್ಲಿ ಸಿನಿಮಾ ತಾರೆಯರಾದ ಪುನೀತ್ ರಾಜ್‌ಕುಮಾರ್, ವಿಜಯ್ ರಾಘವೇಂದ್ರ, ಉಪೇಂದ್ರ ಮತ್ತಿತರ ಸ್ಟಾರ್ ನಟರಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸೋನು ನಿಗಮ್, ಸಂಗೀತಾ ಕಟ್ಟಿ, ಪ್ರವೀಣ್ ಗೋಡ್ಖಿಂಡಿ, ರಘು ದೀಕ್ಷಿತ್, ಶಿವಮೊಗ್ಗ ಸುಬ್ಬಣ್ಣ , ಪಂ. ಜಸ್‌ರಾಜ್, ಪಂ.ವೆಂಕಟೇಶ್ ಕುಮಾರ್, ವಿದ್ವಾನ್ ಡಾ. ಎಂ. ಬಾಲಮುರಳಿಕೃಷ್ಣ , ಪಂ. ರಾಜೀವ್ ತಾರಾನಾಥ್, ಬಿ. ಜಯಶ್ರೀ, ವಾಣಿ ಜಯರಾಂ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ಹಂಸಲೇಖ, ಗುರುಕಿರಣ್ ಸಹ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.

ಕನ್ನಡದಿಂದ ವಿದೇಶಿ ಭಾಷೆ

ವಿಶೇಷ ಚೇತನ ಮಕ್ಕಳನ್ನು ನೋಡಿ ಅವರಿಂದ ಉತ್ತೇಜಿತರಾಗಿ ಇಂಥದ್ದೊಂದು ಪ್ರಾಜೆಕ್ಟ್ ಶುರು ಮಾಡಿದ್ದು, ಕನ್ನಡದಿಂದ ಶುರುವಾಗಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಬಂಗಾಳಿ ಸೇರಿ ಭಾರತದ ಕೆಲ ಭಾಷೆಗಳು ಹಾಗೂ ಚೀನಿ, ಅರೇಬಿಕ್ ಸೇರಿ ಇನ್ನೂ ಹಲವಾರು ವಿದೇಶಿ ಭಾಷೆಗಳ ಸಂಗಮ ಇಲ್ಲಾಗಲಿದೆ.

ಸಂಭಾವನೆ ಬಯಸದೇ ಹಾಡಿದ ಕಲಾವಿದರು

ನಾನಾ ಭಾಷೆಗಳ ಖ್ಯಾತ ಕಲಾವಿದರನ್ನು ಒಟ್ಟುಗೂಡಿಸುವುದು ಸುಲಭವಾಗಿರಲಿಲ್ಲ. ಆದರೆ ಪ್ರತಿ ಕಲಾವಿದರು ಕೂಡ ಸಂಭಾವನೆಯನ್ನು ಬಯಸದೆ ಈ ಪ್ರಾಜೆಕ್ಟ್‌ ನಲ್ಲಿ ಪಾಲ್ಗೊಂಡಿದ್ದಾರಂತೆ. ಬರುವ ಆಗಸ್ಟ್‌ಗೆ ಈ ಹಾಡು ಬಿಡುಗಡೆಯಾಗಲಿದ್ದು, ಆಗ ಪ್ರಪಂಚದಾದ್ಯಂತ ಇದು ಹೋಗುತ್ತದೆ. ಇದರಿಂದ ಸಂಗ್ರಹವಾದ ನಿಧಿಯನ್ನು ಸಂಪೂರ್ಣ ವಿಕಲಚೇತನ ಮಕ್ಕಳ ಏಳಿಗೆಗೆ ನೀಡುವ ಯೋಜನೆ ಮಾಡಿಕೊಳ್ಳಲಾಗಿದೆ. 

ಇದನ್ನು ಓದಿ:

1. ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..! 

2. ಮಗು ಯಾರದ್ದೋ...! ಎದೆಹಾಲು ನೀಡುವವರು ಇನ್ಯಾರೋ..! 

3. ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆ- 17 ಶಸ್ತ್ರಚಿಕಿತ್ಸೆಗಳ ಬಳಿಕ ಕಂಕಣ ಭಾಗ್ಯ..!